ನಾಟಿಂಗ್ಯಾಮ್:ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನ ಸ್ವಿಂಗ್ ಮೂಲಕ ಆಂಗ್ಲ ಬ್ಯಾಟ್ಸ್ಮನ್ಗಳನ್ನು ಕಾಡಿದ ಭಾರತದ ವೇಗದ ಬೌಲರ್ ಮೊಹಮದ್ ಶಮಿ, ಮೊದಲ ದಿನವೇ ಚೆಂಡು ಅಷ್ಟೊಂದು ಬೇಗ ರಿವರ್ಸ್ ಸ್ವಿಂಗ್ ಪಡೆದಿದ್ದು ತಮಗೆ ಆಶ್ಚರ್ಯವೇನು ಆಗಲಿಲ್ಲ ಎಂದು ಹೇಳಿದ್ದಾರೆ.
ಟ್ರೆಂಟ್ ಬ್ರಿಡ್ಜ್ನಲ್ಲಿ ಇಂಗ್ಲೆಂಡ್ 183 ರನ್ಗಳಿಗೆ ಆಲೌಟ್ ಆಗಿದ್ದು, ವೇಗಿಗಳಾದ ಜಸ್ಪ್ರೀತ್ ಬುಮ್ರಾ 4 ಮತ್ತು ಶಮಿ 3 ವಿಕೆಟ್ ಪಡೆದರು. ಇನ್ನಿಂಗ್ಸ್ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿರುವ ಶಮಿ, ರಿವರ್ಸ್ ಸ್ವಿಂಗ್ನಿಂದ ನನಗೆ ಆಶ್ಚರ್ಯವಾಗಲಿಲ್ಲ. ಚೆಂಡನ್ನು ಹೇಗೆ ಬಳಸಿಕೊಳ್ಳುತ್ತೀರಿ ಎಂಬುದು ಕೂಡ ಮುಖ್ಯವಾಗಿರುತ್ತದೆ. ಚೆಂಡನ್ನು ಹೊಳಪಿಗೆ ತಕ್ಕಂತೆ ಅದರ ಪ್ರಯೋಜನ ಪಡೆಯಬೇಕು ಎಂದರು.
ಸದ್ಯ ಪಂದ್ಯದಲ್ಲಿ ನಾವು ಉತ್ತಮ ಸ್ಥಿತಿಯಲ್ಲಿದ್ದೇವೆ, ಅದನ್ನೇ ಮುಂದುವರೆಸಬೇಕಿದೆ. 2ನೇ ದಿನದ ಆರಂಭಿಕ ಗಂಟೆಗಳ ಆಟದತ್ತ ಹೆಚ್ಚು ಗಮನ ಹರಿಸಬೇಕು. 183 ರನ್ಗಳ ಮೊತ್ತ ನಮ್ಮ ಎದುರಿಗಿದ್ದು, ವಿಕೆಟ್ ಕಾಪಾಡಿಕೊಂಡು ಯೋಜಿತ ಗುರಿ ತಲುಪುವುದು ಮುಖ್ಯ. ನನಗೆ ನನ್ನ ಕೌಶಲ್ಯದ ಮೇಲೆ ನಂಬಿಕೆಯಿದೆ. ಪರಿಸ್ಥಿತಿಗೆ ಅನುಗುಣವಾಗಿ ಪ್ಲಾನ್ ಮಾಡುತ್ತೇನೆ ಎಂದು ಹೇಳಿದರು.
ಮೊದಲ ದಿನ ಆಂಗ್ಲರನ್ನು 183 ರನ್ಗಳಿಗೆ ಕಟ್ಟಿಹಾಕಿದ ಟೀಂ ಇಂಡಿಯಾ, ದಿನದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 21 ರನ್ ಗಳಿಸಿದೆ. ಭಾರತದ ಪರ ಮೊಹಮ್ಮದ್ ಶಮಿ 23ಕ್ಕೆ 3, ಬುಮ್ರಾ 46ಕ್ಕೆ4, ಮೊಹಮ್ಮದ್ ಸಿರಾಜ್ 48ಕ್ಕೆ 1, ಶಾರ್ದುಲ್ ಠಾಕೂರ್ 41ಕ್ಕೆ 2 ವಿಕೆಟ್ ಪಡೆದಿದ್ದಾರೆ.
ಇದನ್ನೂ ಓದಿ:ನಾಟಿಂಗ್ಹ್ಯಾಮ್ ಟೆಸ್ಟ್ : ಇಂಗ್ಲೆಂಡ್ 183ಕ್ಕೆ ಆಲೌಟ್, ಉತ್ತಮ ಆರಂಭದತ್ತ ಕೊಹ್ಲಿ ಪಡೆ