ನಾಟಿಂಗ್‌ಹ್ಯಾಮ್ :ಇಂಗ್ಲೆಂಡ್ ಹಾಗೂ ಭಾರತ ನಡುವಿನ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯದ ಮೂರನೇ ದಿನವೂ ಕೂಡ ವರುಣನ ಕಾಟದಿಂದ ಆಟ ಕೊನೆಗೊಂಡಿತು. ದಿನದಾಟದ ಅಂತ್ಯಗೊಂಡಾಗ ಆಂಗ್ಲರು ಎರಡನೇ ಇನ್ನಿಂಗ್ಸ್‌ನಲ್ಲಿ 11.1 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 25 ರನ್ ಗಳಿಸಿದ್ದು, 70 ರನ್ಗಳ ಹಿನ್ನಡೆಯಲ್ಲಿದ್ದಾರೆ.
ಇಂಗ್ಲೆಂಡ್ ಆರಂಭಿಕರಾದ ರೊರಿ ಬರ್ನ್ಸ್ ಮತ್ತು ಡೊಮಿನಿಕ್ ಸಿಬ್ಲಿ ಕ್ರಮವಾಗಿ 11 ಮತ್ತು 9 ರನ್ ಗಳಿಸಿ ಅಜೇಯರಾಗುಳಿದಿದ್ದಾರೆ. ದಿನದ ಮೂರನೇ ಅವಧಿಯಲ್ಲಿ ನಿರಂತರ ಮಳೆಯಿಂದಾಗಿ ಆಟ ನಿಲ್ಲಿಸಲಾಯಿತು.
ಇದಕ್ಕೂ ಮುನ್ನ ಭಾರತ 278 ರನ್ಗಳಿಗೆ ಆಲೌಟ್ ಆಗುವ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ 95 ರನ್ಗಳ ಮುನ್ನಡೆ ಸಾಧಿಸಿತು. ಟೀಂ ಇಂಡಿಯಾ ಪರ 2ನೇ ದಿನದಾಟದ ಅಂತ್ಯದಲ್ಲಿ ಅರ್ಧಶತಕ ಬಾರಿಸಿದ್ದ ಕನ್ನಡಿಗ ರಾಹುಲ್ 84 ರನ್ ಗಳಿಸಿ ವಿಕೆಟ್ ಒಪ್ಪಿಸುವ ಮೂಲಕ ಶತಕದಂಚಿನಲ್ಲಿ ಎಡವಿದರು. 25 ರನ್ ಬಾರಿಸಿದ ರಿಷಬ್ ಪಂತ್ ಹಾಗೂ ಅರ್ಧ ಶತಕ ಗಳಿಸಿದ ಆಲ್ರೌಂಡರ್ ರವೀಂದ್ರ ಜಡೇಜಾ (56) ರಾಹುಲ್ಗೆ ಉತ್ತಮ ಸಾಥ್ ನೀಡಿದರು.