ಕೊಲಂಬೊ:ಆರ್.ಪ್ರೇಮದಾಸ್ ಮೈದಾನದಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ರೋಚಕ ಗೆಲುವು ಪಡೆದುಕೊಂಡಿದೆ. ಅನೇಕ ನಾಟಕೀಯ ಬೆಳವಣಿಗೆಗಳಿಗೆ ಪಂದ್ಯ ಕಾರಣವಾಗಿದ್ದರಿಂದ ಕೊನೆಯ ಓವರ್ವರೆಗೂ ರೋಚಕತೆಯಿಂದ ಕೂಡಿತ್ತು. ಇದರ ಮಧ್ಯೆ ಡ್ರೆಸ್ಸಿಂಗ್ ರೂಂನಲ್ಲಿದ್ದ ಕೋಚ್ ರಾಹುಲ್ ದ್ರಾವಿಡ್ ದಿಢೀರ್ ಆಗಿ ಹೊರಗಡೆ ಬಂದು ರಾಹುಲ್ ಚಹರ್ ಬಳಿ ಕೆಲಹೊತ್ತು ಮಾತನಾಡಿರುವ ದೃಶ್ಯಗಳು ಎಲ್ಲೆಡೆ ವೈರಲ್ ಆಗಿವೆ.
276 ರನ್ ಬೆನ್ನತ್ತಿದ್ದ ಟೀಂ ಇಂಡಿಯಾ 193 ರನ್ಗಳಿಕೆ ಮಾಡುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೊಳಗಾಗಿತ್ತು. ಈ ವೇಳೆ ಮೈದಾನದಲ್ಲಿ ದೀಪಕ್ ಚಹರ್ಗೆ ಕೋಚ್ ರಾಹುಲ್ ದ್ರಾವಿಡ್ ಆಟಗಾರನ ಮೂಲಕ ಕೆಲವೊಂದು ಸೂಚನೆ ನೀಡಿದ್ದಾರೆ. ಟೀಂ ಇಂಡಿಯಾ 44ನೇ ಓವರ್ ಎದುರಿಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಮೈದಾನದಲ್ಲಿ 5ರನ್ಗಳಿಕೆ ಮಾಡಿದ್ದ ಭುವಿ ಹಾಗೂ 49ರನ್ ಗಳಿಸಿದ್ದ ದೀಪಕ್ ಚಹರ್ ಬ್ಯಾಟಿಂಗ್ ಮಾಡ್ತಿದ್ದಾಗ ಡ್ರೆಸ್ಸಿಂಗ್ ರೂಂನಿಂದ ಎದ್ದು ಬಂದಿರುವ ಕೋಚ್ ರಾಹುಲ್ ದ್ರಾವಿಡ್ ಡಗೌಟ್ನಲ್ಲಿ ಕುಳಿತುಕೊಂಡಿದ್ದ ರಾಹುಲ್ ಚಹರ್ ಬಳಿ ಕೆಲವೊಂದು ಸಲಹೆ ನೀಡಿದ್ದಾರೆ. ಅವುಗಳನ್ನು ಮೈದಾನದಲ್ಲಿ ಬ್ಯಾಟ್ ಬೀಸುತ್ತಿದ್ದ ದೀಪಕ್ ಚಹರ್ಗೆ ತಲುಪಿಸುವಂತೆಯೂ ಹೇಳಿದ್ದಾರೆ. ಇದಾದ ಬಳಿಕ ಮೈದಾನಕ್ಕೆ ತೆರಳಿದ್ದ ಸಹ ಆಟಗಾರ ರಾಹುಲ್ ಚಹರ್, ಕೋಚ್ ನೀಡಿದ್ದ ಸಲಹೆಗಳನ್ನು ದೀಪಕ್ ಚಹಾರ್‌ಗೆ ಹೇಳಿದ್ದರು.
ಇದನ್ನೂ ಓದಿ: ಪಿಪಿಸಿಸಿ ಅಧ್ಯಕ್ಷರಾಗುತ್ತಿದ್ದಂತೆ ಅಲರ್ಟ್; ಪಂಜಾಬ್‌ನಲ್ಲಿ ತಮ್ಮ ಬಣದ ಶಕ್ತಿ ಹೆಚ್ಚಿಸಿಕೊಳ್ಳುತ್ತಿರುವ ಸಿಧು
ಲಭ್ಯವಾಗಿರುವ ಮಾಹಿತಿ ಪ್ರಕಾರ, ಮೈದಾನದಲ್ಲಿ ರಕ್ಷಣಾತ್ಮಕ ಆಟದ ಮೊರೆ ಹೋಗುವಂತೆ ರಾಹುಲ್ ದ್ರಾವಿಡ್ ಬ್ಯಾಟ್ಸ್ಮನ್ ದೀಪಕ್ ಚಹರ್ಗೆ ಸೂಚನೆ ನೀಡಿದ್ದರು ಎನ್ನಲಾಗಿದೆ. ಪಂದ್ಯದ ಕೊನೆಯವರೆಗೂ ವಿಕೆಟ್ ಕಾಯ್ದುಕೊಂಡು ಬ್ಯಾಟಿಂಗ್ ಮಾಡಿದ್ದರಿಂದಲೇ ನಿನ್ನೆ ಟೀಂ ಇಂಡಿಯಾ ಗೆಲುವು ದಾಖಲು ಮಾಡಿದೆ. ಈ ಹಿಂದೆ ಕೂಡ ರಾಹುಲ್ ದ್ರಾವಿಡ್ ಇಂಡಿಯಾ ಎ ತಂಡದ ಕೋಚ್ ಆಗಿದ್ದ ಸಂದರ್ಭದಲ್ಲಿ ದೀಪಕ್ ಚಹರ್ ಕೆಲವೊಂದು ಪಂದ್ಯಗಳನ್ನು ತಂಡಕ್ಕಾಗಿ ಗೆಲ್ಲಿಸಿಕೊಟ್ಟಿರುವ ಉದಾಹರಣೆಗಳಿವೆ. ಪಂದ್ಯ ಮುಗಿದ ಬಳಿಕ ಮಾತನಾಡಿರುವ ದೀಪಕ್ ಚಹರ್, ರಾಹುಲ್ ಸರ್ ನನ್ನ ಮೇಲೆ ಇಟ್ಟಿರುವ ನಂಬಿಕೆ ಉಳಿಸಿಕೊಂಡಿದ್ದೇನೆ ಎಂದಿದ್ದರು.