ನವದೆಹಲಿ/ಗಾಜಿಯಾಬಾದ್:ರಾಷ್ಟ್ರೀಯ ದಿವ್ಯಾಂಗರ ಕ್ರಿಕೆಟ್ ಟೂರ್ನಿಯಲ್ಲಿ ಆಟವಾಡುತ್ತಾ, ಮಹೇಂದ್ರ ಸಿಂಗ್ ಧೋನಿಯಂತೆ ಹೆಲಿಕಾಪ್ಟರ್ ಶಾಟ್ ಹೊಡೆಯುತ್ತಿದ್ದ ಬ್ಯಾಟರ್ ಇದೀಗ ಹೊಟ್ಟೆಪಾಡಿಗೋಸ್ಕರ ಇ-ರಿಕ್ಷಾ ಚಾಲನೆ ಮಾಡ್ತಿದ್ದಾರೆ. ವೀಲ್ ಚೇರ್ ಕ್ರಿಕೆಟ್ ಆಡುವ ಇವರು, ಜೀವನದ ಬಂಡಿ ಸಾಗಿಸಲು ಗಾಜಿಯಾಬಾದ್ ಬೀದಿಗಳಲ್ಲಿ ಇ-ರಿಕ್ಷಾ ಓಡಿಸುತ್ತಿದ್ದಾರೆ.
ಗಾಜಿಯಾಬಾದ್ನ ಮಹೇಂದ್ರ ಸಿಂಗ್ ಧೋನಿ ಎಂದು ಗುರುತಿಸಿಕೊಂಡಿದ್ದ ದಿವ್ಯಾಂಗ ಕ್ರಿಕೆಟಿಗ ರಾಜಾ ಬಾಬು ಹೆಲಿಕಾಪ್ಟರ್ ಶಾಟ್ಗಳಿಂದಲೇ ಫೇಮಸ್. ಗಾಲಿಕುರ್ಚಿಯಲ್ಲಿ ಕುಳಿತು ಬ್ಯಾಟ್ ಮಾಡಲು ಶುರು ಮಾಡಿದ್ರೆ ಇವರ ಆಟ ನೋಡಲು ಅಪಾರ ಸಂಖ್ಯೆಯಲ್ಲಿ ಜನರೂ ಸೇರುತ್ತಿದ್ದರು. ಆದರೀಗ ಜೀವನದಲ್ಲಿ ಸಾಕಷ್ಟು ಕಷ್ಟ ಕಂಡುಂಡಿರುವ ಇವರಿಗೆ ಜೀವನೋಪಾಯಕ್ಕಾಗಿ ಇ-ರಿಕ್ಷಾವೇ ಆಸರೆಯಾಗಿದೆ.
ಅಂಗವಿಕಲರ ಕ್ರಿಕೆಟ್ ಅಸೋಷಿಯೇಷನ್ ಅಡಿಯಲ್ಲಿ ರಾಜಾ ಬಾಬು ಕ್ರಿಕೆಟ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅನೇಕ ರಾಜ್ಯ ಪ್ರಶಸ್ತಿಗಳೂ ಇವರನ್ನು ಅರಸಿಕೊಂಡು ಬಂದಿವೆ.
ಹತ್ತಾರು ಪ್ರಶಸ್ತಿ ಗೆದ್ದಿರುವ ರಾಜು ಬಾಬು 'ಜೆರ್ಸಿ' ಸಿನಿಮಾಕ್ಕಿಂತ ಭಿನ್ನವಾಗಿಲ್ಲ ಇವರ ಸ್ಟೋರಿ: ಮೂಲತಃ ಜಲೌನ್ನವರಾಗಿರುವ ರಾಜಾಬಾಬು ಗಾಜಿಯಾಬಾದ್‌ನಲ್ಲಿ ವಾಸವಿದ್ದಾರೆ. 2017ರಲ್ಲಿ ಯುಪಿ ಕ್ರಿಕೆಟ್ ತಂಡದ ನಾಯಕನಾಗಿ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಕೇವಲ 20 ಎಸೆತಗಳಲ್ಲಿ 67 ರನ್ ಸಿಡಿಸಿದ ದಾಖಲೆ ಇವರ ಹೆಸರಲ್ಲಿದೆ.
ತೀವ್ರ ಹಣಕಾಸು ಮುಗ್ಗಟ್ಟಿನಿಂದ ಇ-ರಿಕ್ಷಾ ಓಡಿಸುತ್ತಾ ಜೀವನ ನಡೆಸುತ್ತಿದ್ದಾರೆ. ಇಂದು ಮಗನಿಗೆ ಕ್ರಿಕೆಟ್ ಜೆರ್ಸಿ, ಕಿಟ್ ಖರೀದಿಸಲೂ ಸಾಧ್ಯವಾಗದಂತಹ ಪರಿಸ್ಥಿತಿ ಇವರದ್ದು. 1997ರಲ್ಲಿ ಕೇವಲ ಏಳು ವರ್ಷದವರಾಗಿದ್ದ ರಾಜಾ ಬಾಬು ರೈಲು ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದರು. ಆದರೆ, ಕ್ರಿಕೆಟ್ ಬಗ್ಗೆ ವಿಶೇಷ ಒಲವು ಹೊಂದಿದ್ದು ಅಂಗವಿಕಲ ಕ್ರಿಕೆಟ್ನ ಸದಸ್ಯರಾಗಿದ್ದರು.
ಅನೇಕ ಕ್ರಿಕೆಟ್ ಪಂದ್ಯಗಳಲ್ಲಿ ಭಾಗಿ ಇದನ್ನೂ ಓದಿ:ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಐರ್ಲೆಂಡ್ ಅಪ್ರತಿಮ ಆಲ್‌ರೌಂಡರ್ ಕೆವಿನ್ ಒಬ್ರೇನ್ ವಿದಾಯ
ರಾಜ್ಯ ಪ್ರಶಸ್ತಿಗೆ ಭಾಜನರಾಗಿರುವ ರಾಜಾಬಾಬು ಬಗ್ಗೆ 2017ರಲ್ಲಿ ನಿಯತಕಾಲಿಕೆ, ಮಾಧ್ಯಮಗಳಲ್ಲಿ ವಿಶೇಷ ಲೇಖನಗಳು ಪ್ರಕಟಗೊಂಡಿದ್ದವು. ಈ ಸಂದರ್ಭದಲ್ಲಿ ನೋಯ್ಡಾದ ಸಾಮಾಜಿಕ ಕಾರ್ಯಕರ್ತರೊಬ್ಬರು ಇ-ರಿಕ್ಷಾ ನೀಡಿ ಸಹಾಯ ಮಾಡಿದ್ದರು. ಇಲ್ಲಿಯವರೆಗೆ ಸುಮಾರು 15 ರಾಜ್ಯಗಳಲ್ಲಿ ರಾಷ್ಟ್ರೀಯ ಅಂಗವಿಕಲರ ಕ್ರಿಕೆಟ್ ಆಡಿರುವ ಇವರು, ಉತ್ತಮ ಪ್ರದರ್ಶನವನ್ನೂ ನೀಡಿದ್ದಾರೆ. ಆದರೀಗ ಹಣಕಾಸಿನ ತೊಂದರೆಯಿಂದಾಗಿ ಬಾಡಿಗೆ ಮನೆಯಲ್ಲಿಯೇ ಇವರ ವಾಸ. ಇವರಿಗೆ ಇಬ್ಬರು ಮಕ್ಕಳು, ತಂದೆ, ತಾಯಿ ಇದ್ದಾರೆ.