ನವದೆಹಲಿ:ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್‌ನಲ್ಲಿ ಭಾರತ ಹೀನಾಯವಾಗಿ ಸೋತ ನಂತರ ಟೀಂ ಇಂಡಿಯಾದ ಮ್ಯಾನೇಜ್‌ಮೆಂಟ್ ಮತ್ತು ನಾಯಕ ರೋಹಿತ್ ಶರ್ಮಾ ತೀವ್ರ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಹಲವು ದಿಗ್ಗಜರು ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸುವ ಬಗ್ಗೆ ಮಾತನಾಡಿದ್ದಾರೆ. ಭಾರತದ ಮಾಜಿ ಕ್ರಿಕೆಟಿಗ ಮತ್ತು ಆಯ್ಕೆಗಾರ ದಿಲೀಪ್ ವೆಂಗ್‌ಸರ್ಕರ್ ಅವರ ಹೆಸರೂ ಸಹ ಟೀಕಿಸಿದ ಅನುಭವಿಗಳ ಪಟ್ಟಿಗೆ ಸೇರ್ಪಡೆಯಾಗಿದೆ.
ವೆಂಗ್‌ಸರ್ಕರ್ ಅವರು ರೋಹಿತ್ ಶರ್ಮಾ ಮತ್ತು ಬ್ಯಾಟರ್ಗಳನ್ನು ಗುರಿಯಾಗಿಸಿಕೊಂಡಿಲ್ಲ, ಆದರೂ ಅವರು ನೇರವಾಗಿ ಬಿಸಿಸಿಐನ ಮೇಲೆ ಹರಿಹಾಯ್ದಿದ್ದಾರೆ. ಬಿಸಿಸಿಐನ ಆಯ್ಕೆ ಸಮಿತಿ ಮತ್ತು ತಂಡದ ಮ್ಯಾನೇಜ್‌ಮೆಂಟ್ ಮುಂದಾಲೋಚನೆ ರಹಿತವಾಗಿ ಕೆಲಸ ಮಾಡುತ್ತಿದೆ ಎಂದು ಟೀಕಿಸಿದ್ದಾರೆ.
ದಿಲೀಪ್ ವೆಂಗ್‌ಸರ್ಕರ್ ಇತ್ತೀಚಿನ ಸಂದರ್ಶನವೊಂದರಲ್ಲಿ,"ರೋಹಿತ್ ಶರ್ಮಾ ಪ್ರಸ್ತುತ ನಾಯಕರಾಗಿದ್ದಾರೆ. ಆದರೆ ಭವಿಷ್ಯದ ನಾಯಕನಾಗಿ ಬಿಸಿಸಿಐ ಯಾವುದೇ ಆಟಗಾರನನ್ನು ಇನ್ನೂ ಸಿದ್ಧಪಡಿಸಿಲ್ಲ. ಇದೊಂದು ದೊಡ್ಡ ವೈಫಲ್ಯ. ಕಳೆದ 6- 7 ವರ್ಷಗಳಿಂದ ನಾನು ನೋಡಿದ ಆಯ್ಕೆದಾರರಿಗೆ ಆಟದ ಬಗ್ಗೆ ಯಾವುದೇ ತಿಳುವಳಿಕೆ ಇಲ್ಲ ಅಥವಾ ಅವರಿಗೆ ಯಾವುದೇ ದೂರದೃಷ್ಟಿಯೇ ಇಲ್ಲ" ಎಂದು ಹೇಳಿದರು.
ಇದಕ್ಕೆ ಕಾರಣವೂ ಇದೆ. ಶಿಖರ್ ಧವನ್ ಅವರನ್ನು ಕೆಲ ಪಂದ್ಯಗಳಿಗೆ ನಾಯಕರನ್ನಾಗಿ ಮಾಡಲಾಯಿತು. ಆದರೆ, ಮತ್ತೆ ಅವರನ್ನೇ ತಂಡದಿಂದ ಹೊರಗಿಡಲಾಗಿದೆ. ರಹಾನೆಯ ಸ್ಥಿತಿಯೂ ತಂಡದಲ್ಲಿ ಹಾಗೇ ಇದೆ. ಪಂತ್ ಅವರನ್ನು ಬಿಸಿಸಿಐ ಮುಂದಿನ ನಾಯಕ ಎಂಬಂತೆ ಬಿಂಬಿಸಿ ಆಡಿಸುತ್ತಿತ್ತು. ಆದರೆ ಪರ್ಯಾಯ ಆಟಗಾರರನ್ನು ಸರಿಯಾಗಿ ಹುಟ್ಟುಹಾಕಿಲ್ಲ. ಈಗ ನಾಯಕತ್ವ ಅನಿಶ್ಚಿತವಾಗಿರುವುದಂತೂ ಅಭಿಮಾನಿಗಳಿಗೆ ಕಾಣುತ್ತಿರುವ ಸತ್ಯ.