ನವದೆಹಲಿ:ಭಾರತ ಪ್ರವಾಸದಲ್ಲಿರುವ ಕಿವೀಸ್ ಈಗಾಗಲೇ ಏಕದಿನ ಸರಣಿ ಸೋತಿದೆ. ನಾಳೆ ಇಂದೋರ್ನಲ್ಲಿ ನಡೆಯಲಿರುವ ಕೊನೆಯ ಏಕದಿನ ಪಂದ್ಯದಲ್ಲಿ ಗೆದ್ದು ಬ್ಲಾಕ್ಕ್ಯಾಪ್ಸ್ ಕ್ಲೀನ್ ಸ್ವೀಪ್ನಿಂದ ತಪ್ಪಿಸಿಕೊಳ್ಳಬೇಕಿದೆ. ಮೊದಲ ಪಂದ್ಯದಲ್ಲಿ ಬೃಹತ್ ಮೊತ್ತವನ್ನು ಬೆನ್ನಟ್ಟಿದ್ದ ನ್ಯೂಜಿಲ್ಯಾಂಡ್ ಕೂದಲಳೆಯ ಅಂತರದಲ್ಲಿ ಸೋಲನುಭವಿಸಿತ್ತು. ಎರಡನೇ ಪಂದ್ಯದಲ್ಲಿ ಭಾರತೀಯ ಬೌಲರ್ಗಳ ಪರಾಕ್ರಮದ ಮುಂದೆ ಮಣಿದು ಅಲ್ಪ ಮೊತ್ತಕ್ಕೆ ಕುಸಿದಿತ್ತು. ಈ ಎರಡು ಪಂದ್ಯ ಭಾರತ ಗೆದ್ದು 2-0ಯಿಂದ ಸರಣಿಯನ್ನು ತನ್ನ ತೆಕ್ಕೆಗೆ ತೆಗೆದು ಕೊಂಡಿತ್ತು.
ಭಾರತದ ಈ ವಿಜಯಕ್ಕೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಪಾಕ್ ನಾಯಕನನ್ನು ಹಳಿದಿದ್ದಾರೆ. ಭಾರತದಲ್ಲಿ ಕೀವಿಸ್ ಎರಡು ಪಂದ್ಯದಲ್ಲಿ ಸೋತು ಸರಣಿ ಕೈಚೆಲ್ಲಿದ ನಂತರ ಪಾಕ್ನ ಹಿರಿಯ ಕ್ರಿಕೆಟಿಗ ಪಾಕಿಸ್ತಾನ ತಂಡಕ್ಕೆ ಹಿಡಿಶಾಪ ಹಾಕಿದ್ದಾರೆ. ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ ಅವರು ನಾಯಕ ಬಾಬರ್ ಆಜಂ ವಿರುದ್ಧ ಕಿಡಿಕಾರಿದ್ದಾರೆ. ಅರೆ ಭಾರತ ಗೆಲ್ಲುವುದಕ್ಕೂ ಪಾಕ್ ನಾಯಕನಿಗೂ ಏನು ಸಂಬಂಧ ಎಂಬ ಪ್ರಶ್ನೆ ಹುಟ್ಟದೇ ಇರದು. ಇದಕ್ಕೆ ಕಾರಣ ನ್ಯೂಜಿಲ್ಯಾಂಡ್ ಭಾರತ ಪ್ರಸಾಕ್ಕೂ ಮೊದಲು ಪಾಕಿಸ್ತಾನದಲ್ಲಿ ಪಂದ್ಯಗಳನ್ನಾಡಿತ್ತು. ಇದರಲ್ಲಿ ಪಾಕ್ ಸರಣಿ ಸೋತಿತ್ತು. ಇದರಿಂದ ಮಾಜಿ ಕ್ರಿಕೆಟಿಗ ಭಾರತದ ಬ್ಯಾಟಿಂಗ್ನ್ನು ಹೊಗಳಿದ್ದು, ಪಾಕ್ ನಾಯಕನಿಗೆ ಬ್ಯಾಟಿಂಗ್ ಬಗ್ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಡ್ಯಾನಿಶ್ ಕನೇರಿಯಾ ಹೇಳಿದ್ದೇನು?:ಪಾಕ್ ಬ್ಯಾಟರ್ಗಳು ಜವಾಬ್ದಾರಿ ತೆಗೆದುಕೊಳ್ಳುತ್ತಿಲ್ಲ. ತಂಡದ ಸೋಲಿಗೆ ತಂಡದ ಬ್ಯಾಟರ್ಗಳೇ ಕಾರಣ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ತನ್ನ ಟಿ20 ನಾಯಕತ್ವದ ಬಗ್ಗೆ ಯೋಚಿಸಬೇಕಾಗಿದೆ. ಬಾಬರ್ ಆಜಂ ನಾಯಕತ್ವ ವಹಿಸಿಕೊಂಡ ನಂತರ ನಾಯಕನ ಜವಾಬ್ದಾರಿಯನ್ನು ಯಾರಿಗೆ ನೀಡಲಾಗುವುದು? ಪಾಕಿಸ್ತಾನ ತಂಡ ಏಕದಿನದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿಲ್ಲ ಎಂದು ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ ತಮ್ಮ ದೇಶದ ತಂಡವನ್ನು ತೀವ್ರವಾಗಿ ಟೀಕಿಸಿದ್ದಾರೆ.
ತವರಿನಲ್ಲಿ ಸತತ ಸರಣಿ ಸೋಲು:ಪಾಕಿಸ್ತಾನ ತವರಿನಲ್ಲಿ ಹೋದ ವರ್ಷದಿಂದ ದ್ವಿಪಕ್ಷೀಯ ಸರಣಿಗಳನ್ನು ಆಯೋಜಿಸುತ್ತಿದೆ. ಸುಮಾರು 12 ವರ್ಷಗಳ ನಂತರ ಪಾಕ್ನಲ್ಲಿ ಅಂತಾರಾಷ್ಟ್ರೀಯ ಸರಣಿಗಳು ಆರಂಭವಾಗಿದ್ದವು. 2009ರಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಸದಸ್ಯರಿರುವ ಬಸ್ ಮೇಲೆ ಉಗ್ರರ ದಾಳಿ ಮಾಡಿದ ನಂತರ ಯಾವುದೇ ದೇಶ, ಪಾಕ್ ನೆಲದಲ್ಲಿ ದ್ವೀಪಕ್ಷೀಯ ಸರಣಿ ಆಡಿರಲ್ಲಿಲ್ಲ. ಕಳೆದ ವರ್ಷ ಇಂಗ್ಲೆಂಡ್ ಪಾಕ್ಗೆ ಹೋಗುವ ಮೂಲಕ ನಿರ್ಬಂದಕ್ಕೆ ಕೊನೆ ಹಾಡಿತ್ತು.