ನವದೆಹಲಿ:ಟೀಂ ಇಂಡಿಯಾದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ತಂದೆಯಾಗಿದ್ದಾರೆ. ಅವರ ಪತ್ನಿ ಸಂಜನಾ ಗಣೇಶನ್ ಸೋಮವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಬುಮ್ರಾ ಈ ಸಂತಸದ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಫೋಟೋವನ್ನು ಶೇರ್ ಮಾಡಿದ್ದಾರೆ.
ನಮ್ಮ ಪುಟ್ಟ ಕುಟುಂಬ ಬೆಳೆದಿದೆ. ನಮ್ಮ ಹೃದಯಗಳು ಸಂತೋಷದಿಂದ ತುಂಬಿವೆ. ಇಂದು ಬೆಳಗ್ಗೆ ನಾವು ನಮ್ಮ ಮಗು ಅಂಗದ್ ಜಸ್ಪ್ರೀತ್ ಬುಮ್ರಾ ಅವರನ್ನು ಈ ಜಗತ್ತಿಗೆ ಸ್ವಾಗತಿಸಿದೆವು. ಈಗ ನಮ್ಮ ಸಂತೋಷಕ್ಕೆ ಮಿತಿಯಿಲ್ಲ. ಪೋಷಕರಾಗಿ ನಮ್ಮ ಜೀವನದಲ್ಲಿ ಈ ಹೊಸ ಅಧ್ಯಾಯದ ಪ್ರತಿ ಕ್ಷಣವನ್ನು ಆನಂದಿಸಲು ನಾವು ಎದುರು ನೋಡುತ್ತಿದ್ದೇವೆ ಎಂದು ಜಸ್ಪ್ರೀತ್ ಬುಮ್ರಾ ಇನ್ಸ್ಟಾಗ್ರಾಂನಲ್ಲಿ ಬರೆದಿದ್ದಾರೆ. ಈ ಸಂದರ್ಭದಲ್ಲಿ, ಬುಮ್ರಾ ದಂಪತಿಗಳು ಮಗುವಿನ ಕೈ ಹಿಡಿದಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.
ಇದರೊಂದಿಗೆ ಕ್ರಿಕೆಟಿಗರು ಹಾಗೂ ಅಭಿಮಾನಿಗಳು ಬುಮ್ರಾ ದಂಪತಿಗೆ ಶುಭಾಶಯ ಕೋರುತ್ತಿದ್ದಾರೆ. ಕ್ರಿಕೆಟಿಗರಾದ ಸೂರ್ಯ ಕುಮಾರ್ ಯಾದವ್, ದಿನೇಶ್ ಕಾರ್ತಿಕ್, ರೋಹಿತ್ ಶರ್ಮಾ ಪತ್ನಿ ರಿತಿಕಾ ಸಜ್ದೆ, ಯುವರಾಜ್ ಪತ್ನಿ ಹೇಜಲ್ ಕೀಚ್ ಮತ್ತು ಇತರರು ಬುಮ್ರಾ ಅವರನ್ನು ಅಭಿನಂದಿಸಿದ್ದಾರೆ. ಈ ಕಾರಣದಿಂದ ಏಷ್ಯಾಕಪ್ನಲ್ಲಿ ನೇಪಾಳ ವಿರುದ್ಧದ ಇಂದಿನ ಪಂದ್ಯಕ್ಕೆ ಬುಮ್ರಾ ಲಭ್ಯರಿಲ್ಲ ಎಂಬುದು ಗೊತ್ತೇ ಇದೆ.
ಬುಮ್ರಾ ಮಾರ್ಚ್ 2021 ರಲ್ಲಿ ಸಂಜನಾ ಗಣೇಶನ್ ಅವರನ್ನು ವಿವಾಹವಾದರು. ಬೆನ್ನುನೋವಿನಿಂದಾಗಿ ದೀರ್ಘಕಾಲದವರೆಗೆ ಕ್ರಿಕೆಟ್‌ನಿಂದ ದೂರವಿದ್ದ ಬುಮ್ರಾ ಇತ್ತೀಚೆಗೆ ಟೀಂ ಇಂಡಿಯಾಕ್ಕೆ ಮರಳಿದ್ದರು.