ಅಹಮದಾಬಾದ್ (ಗುಜರಾತ್): ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶನಿವಾರ ನಡೆಯಲಿರುವ ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಬಹುನಿರೀಕ್ಷಿತ ಹಣಾಹಣಿಯಲ್ಲಿ ಆರಂಭಿಕ ಬ್ಯಾಟರ್ ಶುಭ್‌ಮನ್ ಗಿಲ್ ಆಡುತ್ತಾರಾ ಎಂಬ ಬಗ್ಗೆ ಭಾರತದ ನಾಯಕ ರೋಹಿತ್ ಶರ್ಮಾ ಮಹತ್ವದ ಮಾಹಿತಿ ನೀಡಿದರು. ವಿಶ್ವಕಪ್ ತಂಡ ಸೇರಿಕೊಂಡ ಗಿಲ್ ಡೆಂಗ್ಯೂಗೆ ತುತ್ತಾಗಿ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದರು. ಇದೀಗ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದಾರೆ. ಬುಧವಾರ ಅಹಮದಾಬಾದ್ ತಲುಪಿದ ಗಿಲ್, ನಿನ್ನೆ (ಗುರುವಾರ) ನೆಟ್ಸ್ನಲ್ಲಿ ಅಭ್ಯಾಸ ಮಾಡಿದ್ದರು. ಅಲ್ಲದೇ ಇಂದೂ ಸಹ ತಂಡದೊಂದಿಗೆ ಮೈದಾನದಲ್ಲಿ ಬೆವರಿಳಿಸಿದ್ದಾರೆ.
ಪಂದ್ಯದ ಮುನ್ನಾದಿನವಾದ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ನಾಯಕ ರೋಹಿತ್ ಶರ್ಮಾ ಮಾತನಾಡಿ, "ಅವರು ಶೇ 99 ರಷ್ಟು ತಂಡದಲ್ಲಿ ಲಭ್ಯವಿರುತ್ತಾರೆ. ನಾಳೆ ನೋಡೋಣ" ಎಂದರು.
ತಂಡದ ಆಟಗಾರರ ಬಗ್ಗೆ ಕೇಳಿದಾಗ, "ನಾನಿನ್ನೂ ಪಿಚ್ ನೋಡಿಲ್ಲ. ಆದರೆ, ನಾವು ಯಾವುದೇ ಸಂಯೋಜನೆಯೊಂದಿಗೆ ಆಡಲು ಸಿದ್ಧ. ಯಾವುದೇ ರೀತಿಯ ಪರಿಸ್ಥಿತಿಯಲ್ಲೂ ಆಡುತ್ತೇವೆ ಎಂಬುದರ ಆಧಾರದ ಮೇಲೆ ತಂಡವಾಗಿ ಕಾರ್ಯನಿರ್ವಹಿಸುತ್ತೇವೆ. ತಂಡದಲ್ಲಿ ಬೇಕಾದರೆ ಎರಡು ಬದಲಾವಣೆ ಆಗಬಹುದು, ಅದಕ್ಕೆ ತಂಡದ ಮನಸ್ಥಿತಿ ಸಿದ್ಧವಾಗಿದೆ. ಬದಲಾವಣೆಗಳ ಬಗ್ಗೆ ಆಟಗಾರರಿಗೆ ಮುಂಚಿತವಾಗಿ ತಿಳಿಸಲಾಗಿದೆ. ಆದ್ದರಿಂದ ಆಟಗಾರರೊಂದಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ನಾನು ಭಾವಿಸುತ್ತೇನೆ. ನಮಗೆ ಮೂರು ಸ್ಪಿನ್ನರ್‌ಗಳನ್ನು ಆಡುವ ಅವಶ್ಯಕತೆ ಇದ್ದರೆ ನಾವು ಮೂರು ಸ್ಪಿನ್ನರ್‌ಗಳ ಜೊತೆ ಮೈದಾನಕ್ಕಿಳಿಯುತ್ತೇವೆ" ಎಂದರು.