ಅಹಮದಾಬಾದ್ (ಗುಜರಾತ್):ಟೀಂ ಇಂಡಿಯಾದ ಭವಿಷ್ಯದ ತಾರೆ ಎಂದೇ ಗುರುತಿಸಿಕೊಂಡಿರುವ ಶುಭ್‌ಮನ್ ಗಿಲ್ ಡೆಂಘೀ ಜ್ವರದಿಂದ ಚೇತರಿಸಿಕೊಳ್ಳುತ್ತಿದ್ದು, ಇಂದು ಅವರು ಗುಜರಾತ್ನ ಅಹಮದಾಬಾದ್‌ಗೆ ಬಂದಿಳಿದರು. ಭಾರತ ಕ್ರಿಕೆಟ್ ತಂಡವನ್ನು ಸೇರಿಕೊಂಡಿರುವ ಆಟಗಾರ, ಗುರುವಾರ ಸಂಜೆ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಒಂದು ಗಂಟೆ ಕಾಲ ನೆಟ್ ಅಭ್ಯಾಸ ನಡೆಸಿದರು. ಇದು ತಂಡಕ್ಕೆ ದೊಡ್ಡ ನಿರಾಳತೆ ತಂದಿದೆ.
ವಿಶ್ವದ ದೊಡ್ಡ ಕ್ರೀಡಾಂಗಣವಾಗಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅಕ್ಟೋಬರ್ 14 ರಂದು ಬದ್ಧವೈರಿ ಪಾಕಿಸ್ತಾನ ವಿರುದ್ಧ ನಡೆಯಲಿರುವ ಹೈವೋಲ್ಟೇಜ್ ಪಂದ್ಯಕ್ಕೆ ಗಿಲ್ ಲಭ್ಯರಾಗುವ ಬಗ್ಗೆ ದೃಢಪಟ್ಟಿಲ್ಲ. ಆದರೆ, ಜ್ವರದಿಂದ ಗುಣಮುಖರಾಗುತ್ತಿರುವ ಅವರು ತಂಡದ ಜೊತೆಗೆ ಕಾಣಿಸಿಕೊಂಡಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಸಂತಸ ತಂದಿದೆ.
ವಿಶ್ವಕಪ್ ಆರಂಭಕ್ಕೂ ಮೊದಲು ಅನಾರೋಗ್ಯಕ್ಕೀಡಾದ ಗಿಲ್ ಚೆನ್ನೈನಲ್ಲಿ ನಡೆದ ಆಸ್ಟ್ರೇಲಿಯಾ ಮತ್ತು ನವದೆಹಲಿಯಲ್ಲಿ ಅಫ್ಘಾನಿಸ್ತಾನದ ವಿರುದ್ಧದ ಮೊದಲೆರಡು ಪಂದ್ಯಗಳನ್ನು ತಪ್ಪಿಸಿಕೊಂಡರು. ತಂಡದ ಚೆನ್ನೈ ತೆರಳಿದ್ದಾಗ ಅಲ್ಲಿಯೇ ಆಸ್ಪತ್ರೆಗೆ ದಾಖಲಾಗಿದ್ದರು. ಬಿಳಿ ರಕ್ತದ ಕಣಗಳ ಕೊರತೆಯಿಂದ ನಿತ್ರಾಣಕ್ಕೀಡಾಗಿರುವ ಗಿಲ್ ಮೇಲೆ ವೈದ್ಯರು ತೀವ್ರ ನಿಗಾ ಇಟ್ಟಿದ್ದಾರೆ. ಇದೀಗ ಆಟಗಾರನ ಆರೋಗ್ಯದಲ್ಲಿ ಸುಧಾರಣೆ ಕಾಣುತ್ತಿದೆ. ಭಾರತ-ಪಾಕಿಸ್ತಾನದ ಪಂದ್ಯದಲ್ಲಿ ಗಿಲ್ ಸ್ಥಾನ ಪಡೆಯದಿದ್ದರೂ, ತಂಡದ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ ಎಂದು ETV ಭಾರತ್ ಬುಧವಾರ ತನ್ನ ವರದಿ ಮಾಡಿತ್ತು. ಅದೀಗ ಸತ್ಯವಾಗಿದೆ.