ಧರ್ಮಶಾಲಾ (ಹಿಮಾಚಲ ಪ್ರದೇಶ): ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಬಾಂಗ್ಲಾದೇಶ ತಂಡ ಶುಭಾರಂಭ ಮಾಡಿದೆ. ಅದ್ಭುತ ಬೌಲಿಂಗ್ ಹಾಗೂ ಬ್ಯಾಟಿಂಗ್ ಪ್ರದರ್ಶನದಿಂದ ತನ್ನ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಆರು ವಿಕೆಟ್ಗಳಿಂದ ಭರ್ಜರಿ ಜಯ ದಾಖಲಿಸಿದೆ. ಅಫ್ಘನ್ನರು ನೀಡಿದ್ದ 157 ರನ್ಗಳ ಗುರಿಯನ್ನು ಬಾಂಗ್ಲಾ 34.4 ಓವರ್ಗಳಲ್ಲಿ ಪೂರೈಸಿ ಗೆಲುವಿನ ನಗೆಬೀರಿದೆ.
ಹಿಮಾಚಲ ಪ್ರದೇಶದ ಧರ್ಮಶಾಲಾ ಕ್ರೀಡಾಂಗಣದಲ್ಲಿ ಇಂದು ನಡೆದ ಅಫ್ಘಾನಿಸ್ತಾನ ತಂಡ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿ ಕೇವಲ 156 ರನ್ಗಳಿಗೆ ಆಲೌಟ್ ಆಗಿತ್ತು. ಈ ಸುಲಭ ಗುರಿ ಬೆನ್ನಟ್ಟಿದ ಬಾಂಗ್ಲಾ ಬ್ಯಾಟರ್ಗಳು ನಿರಾಯಾಸವಾಗಿ ಗೆಲುವು ತಂದುಕೊಟ್ಟರು. ಬೌಲಿಂಗ್ನಲ್ಲಿ ಮಿಂಚಿದ್ದ ಮೆಹಿದಿ ಹಸನ್ ಮಿರಾಜ್ ಬ್ಯಾಟಿಂಗ್ನಲ್ಲೂ ಅರ್ಧಶತಕ ಬಾರಿಸಿ ತಂಡದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಮೂರು ವಿಕೆಟ್ ಹಾಗೂ 57 ರನ್ ಬಾರಿಸಿ ಮಿರಾಜ್ ಪ್ಲೇಯರ್ ಆಫ್ ದಿ ಮ್ಯಾಚ್ ಗೌರವಕ್ಕೂ ಪಾತ್ರರಾದರು.
ಆರಂಭಿಕ ಹಿನ್ನಡೆ ಕಂಡ ಬಾಂಗ್ಲಾ:157 ರನ್ಗಳ ಗುರಿ ಬೆನ್ನಟ್ಟಿದ್ದ ಬಾಂಗ್ಲಾದೇಶ ಉತ್ತಮ ಆರಂಭ ಪಡೆಯಲಿಲ್ಲ. ತಂಡದ ಪರ ಇನ್ನಿಂಗ್ಸ್ ಶುರು ಮಾಡಿದ ತಂಝೀದ್ ಹಸನ್ ಹಾಗೂ ಲಿಟ್ಟನ್ ದಾಸ್ ಬೇಗ ವಿಕೆಟ್ ಒಪ್ಪಿಸಿದರು. ಒಂದು ಬೌಂಡರಿ ಸಮೇತ ಕೇವಲ 5 ರನ್ ಬಾರಿಸಿ ತಂಝೀದ್ ರನೌಟ್ಗೆ ಸಿಲುಕಿದರು. ಇದಾದ ಸ್ವಲ್ಪ ಹೊತ್ತಿನಲ್ಲೇ ಲಿಟ್ಟನ್ ದಾಸ್ (13) ಕೂಡ ಫಜಲ್ಹುಕ್ ಫಾರೂಕಿ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು. ಇದರಿಂದ 6.4 ಓವರ್ಗಳಲ್ಲಿ 27 ರನ್ಗಳಿಗೆ ಆರಂಭಿಕರ ಎರಡು ವಿಕೆಟ್ ಕಳೆದುಕೊಂಡು ಬಾಂಗ್ಲಾ ಆರಂಭಿಕ ಹಿನ್ನಡೆ ಅನುಭವಿಸಿತು.