ಧರ್ಮಶಾಲಾ (ಹಿಮಾಚಲ ಪ್ರದೇಶ): ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಮೂರನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವನ್ನು ಬಾಂಗ್ಲಾದೇಶ ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿದೆ. 37.2 ಓವರ್ಗಳಲ್ಲಿ ಕೇವಲ 156 ರನ್ಗಳಿಗೆ ಅಫ್ಘನ್ನರು ಸರ್ವಪತನ ಕಂಡಿದ್ದಾರೆ. ಇದರಿಂದ ಬಾಂಗ್ಲಾ ತಂಡಕ್ಕೆ ಸುಲಭದ 157 ರನ್ಗಳ ಗೆಲುವಿನ ಗುರಿ ನೀಡಲಾಗಿದೆ.
ಹಿಮಾಚಲ ಪ್ರದೇಶದ ಧರ್ಮಶಾಲಾ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಿವೆ. ಟಾಸ್ ಗೆದ್ದ ಬಾಂಗ್ಲಾ ನಾಯಕ ಶಕೀಬ್ ಅಲ್ ಹಸನ್ ಮೊದಲು ಬೌಲಿಂಗ್ ಆಯ್ದುಕೊಂಡರು. ಇದರಿಂದ ಹಶ್ಮತುಲ್ಲಾ ಶಾಹಿದಿ ಬಳಗ ಬ್ಯಾಟ್ ಮಾಡಲು ಕ್ರೀಸ್ಗೆ ಇಳಿದು ಉತ್ತಮ ಆರಂಭವನ್ನೇ ಪಡೆಯಿತು. ಇದೇ ಇನ್ನಿಂಗ್ಸ್ ಅನ್ನು ಅಫ್ಘಾನಿಸ್ತಾನ ಬ್ಯಾಟರ್ಗಳು ಮುಂದುವರೆಸಿದ್ದರೆ, ಸುಲಭವಾಗಿ ತಂಡದ ಮೊತ್ತ 230 ರನ್ಗಳ ಗಡಿ ತಲುಪಬಹುದಿತ್ತು. ಆದರೆ, ಶಕೀಬ್ ಅಲ್ ಹಸನ್ ಹಾಗೂ ಮೆಹಿದಿ ಹಸನ್ ಮಿರಾಜ್ ಬೌಲಿಂಗ್ ದಾಳಿಗೆ ಆಫ್ಘನ್ನರು ಪ್ರತ್ಯುತ್ತರ ನೀಡಲು ವಿಫಲರಾದರು.
ಇದನ್ನೂ ಓದಿ:World cup 2023: ಭಾರತ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವಾಗಲು ಇಲ್ಲಿವೆ ಪ್ರಮುಖ ಕಾರಣಗಳು!
ಅಫ್ಘನ್ ಪರ ಆರಂಭಿಕರಾದ ವಿಕೆಟ್ ಕೀಪರ್ ರಹಮಾನುಲ್ಲಾ ಗುರ್ಬಾಜ್ ಹಾಗೂ ಇಬ್ರಾಹಿಂ ಜದ್ರಾನ್ ಉತ್ತಮವಾಗಿ ಬ್ಯಾಟ್ ಬೀಸಿದರು. ಆದರೆ, ಮೂರು ಬೌಂಡರಿ, ಒಂದು ಸಿಕ್ಸರ್ನೊಂದಿಗೆ 22 ರನ್ ಗಳಿಸಿ ಆಡುತ್ತಿದ್ದ ಜದ್ರಾನ್ ಅವರನ್ನು ಶಕೀಬ್ ಪೆವಿಲಿಯನ್ಗೆ ಕಳುಹಿಸಿದರು. ನಂತರದಲ್ಲಿ ಬಂದ ರಹಮತ್ ಶಾ ಅವರು ಗುರ್ಬಾಜ್ ಜೊತೆಗೂಡಿ ಇನ್ನಿಂಗ್ಸ್ ಕಟ್ಟುವ ಪ್ರಯತ್ನ ಮಾಡಿದರು. ಆದರೆ, ಬಾಂಗ್ಲಾ ನಾಯಕ ಶಕೀಬ್, ರಹಮತ್ ಶಾ (18) ವಿಕೆಟ್ ಅನ್ನೂ ಕಿತ್ತು ಶಾಕ್ ನೀಡಿದರು.
ಬಳಿಕ ನಾಲ್ಕನೇ ಕ್ರಮಾಂಕದಲ್ಲಿ ಬಂದ ನಾಯಕ ಹಶ್ಮತುಲ್ಲಾ ಶಾಹಿದಿ ಸಹ 18 ರನ್ ಗಳಿಸಿ ಮೆಹಿದಿ ಹಸನ್ ಮಿರಾಜ್ ಬೌಲಿಂಗ್ನಲ್ಲಿ ಕ್ಯಾಚ್ ಕೊಟ್ಟು ನಿರ್ಗಮಿಸಿದರು. ಇದರ ಬೆನ್ನಲ್ಲೇ ರಹಮಾನುಲ್ಲಾ ಗುರ್ಬಾಜ್ ಕೂಡ ಅರ್ಧಶತಕದ ಹೊಸ್ತಿಲಿಲ್ಲ ಎಡವಿದರು. ನಾಲ್ಕು ಬೌಂಡರಿ, ಒಂದು ಸಿಕ್ಸರ್ ಸಮೇತ 47 ರನ್ ಗಳಿಸಿದ್ದ ಗುರ್ಬಾಜ್ ಅವರನ್ನು ಮುಸ್ತಫಿಜುರ್ ರೆಹಮಾನ್ ಔಟ್ ಮಾಡಿದರು.
ಇದರ ಪರಿಣಾಮ ಮೊದಲ ವಿಕೆಟ್ಗೆ 47 ರನ್ ಕಲೆ ಹಾಕಿದ್ದ ಅಫ್ಘನ್ ತಂಡವು 112 ರನ್ ಆಗುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಂತರದಲ್ಲಿ ಅಜ್ಮತುಲ್ಲಾ ಒಮರ್ಜಾಯ್ (22) ಮಾತ್ರ ಬಾಂಗ್ಲಾ ಬೌಲರ್ಗಳ ವಿರುದ್ಧ ಹೋರಾಡುವ ಪ್ರಯತ್ನ ಮಾಡಿದರು. ಉಳಿದಂತೆ ಯಾವುದೇ ಆಟಗಾರರಿಗೆ ಒಂದಂಕಿ ಗಡಿ ದಾಟಲು ಸಾಧ್ಯವಾಗಲಿಲ್ಲ. ಹೀಗಾಗಿ 156 ರನ್ಗಳು ಕಲೆ ಹಾಕಲು ಮಾತ್ರ ಸಾಧ್ಯವಾಯಿತು.
ಬಾಂಗ್ಲಾದೇಶದ ಪರ ಶಕೀಬ್ ಅಲ್ ಹಸನ್ ಮತ್ತು ಮೆಹಿದಿ ಹಸನ್ ಮಿರಾಜ್ ತಲಾ ಮೂರು ವಿಕೆಟ್ ಕಬಳಿಸಿದರು. ಶೋರಿಫುಲ್ ಇಸ್ಲಾಂ ಎರಡು ವಿಕೆಟ್ ಹಾಗೂ ತಸ್ಕಿನ್ ಅಹ್ಮದ್, ಮುಸ್ತಫಿಜುರ್ ರೆಹಮಾನ್ ತಲಾ ವಿಕೆಟ್ ಪಡೆದರು.