ಲಂಡನ್:ವಿಶ್ವಕಪ್ ಟೂರ್ನಿಯಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿದ್ದ ಪಾಕಿಸ್ತಾನ ಕೊನೆಯ ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಸೆಮಿಫೈನಲ್ ಆಸೆ ಜೀವಂತವಾಗಿರಿಸಿಕೊಂಡಿತ್ತು. ಆದ್ರೆ ನಿನ್ನೆ ನಡೆದ ಪಂದ್ಯದಲ್ಲಿ ಕಿವೀಸ್ ವಿರುದ್ದ ಗೆದ್ದ ಆಂಗ್ಲರು, ಪಾಕ್ ಆಸೆಗೆ ತಣ್ಣೀರು ಎರಚಿದ್ದಾರೆ.
1992ರ ವಿಶ್ವಕಪ್ ಟೂರ್ನಿಯಂತೆ ಸಾಲು ಸೋಲುಗಳ ನಂತರ ಗೆಲುವು ಕಂಡ ಪಾಕ್, 1992 ರಂತೆ ಮತ್ತೆ ಇತಿಹಾಸ ಸೃಷ್ಟಿಸುವ ಕನಸಿನಲ್ಲಿತ್ತು. ಆದ್ರೆ, ಪಾಕಿಸ್ತಾನಕ್ಕೆ ಸೆಮಿಫೈನಲ್ ಬಾಗಿಲು ಬಹುತೇಕ ಮುಚ್ಚಿದ್ದು ಸಣ್ಣದೊಂದು ಅಸಾಧ್ಯವಾದ ಅವಕಾಶವಿದೆ.
ಭಾರೀ ರನ್ಗಳ ಅಂತರದಿಂದ ಗೆಲ್ಲಬೇಕು ಪಾಕ್:
ನಾಳೆ ನಡೆಯುವ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ತಂಡ ಭಾರೀ ರನ್ಗಳ ಅಂತರದಿಂದ ಗೆಲುವು ಸಾಧಿಸಬೇಕು. ಆಗ ಮಾತ್ರ ನಾಲ್ಕನೇ ಸ್ಥಾನದಲ್ಲಿರುವ ಕಿವೀಸ್ ಪಡೆಯನ್ನ ಹಿಂದಿಕ್ಕಿ ಸೆಮಿಫೈನಲ್ ತಲುಪುವ ಸಾಧ್ಯತೆ ಇದೆ.
ಒಂದು ವೇಳೆ ಪಾಕ್ ತಂಡ ಮೊದಲು ಬ್ಯಾಟಿಂಗ್ ನಡೆಸಿ 350 ರನ್ ಗಳಿಸಿದ್ರೆ, 311 ರನ್ಗಳ ಅಂತರದಿಂದ ಜಯ ಸಾಧಿಸಬೇಕು. 400 ರನ್ಗಳಿಸಿದ್ರೆ 316 ರನ್ಗಳ ಅಂತರದಿಂದ ಜಯ ಸಾಧಿಸಬೇಕು. 450 ರನ್ ಗಳಿಸಿದ್ರೆ 321 ರನ್ಗಳ ಅಂತರದಿಂದ ಗೆಲುವು ದಾಖಲಿಸಿದ್ರೆ ಮಾತ್ರ ಉತ್ತಮ ರನ್ರೇಟ್ ಆಧಾರದ ಮೇಲೆ ಸೆಮಿಫೈನಲ್ ತಲುಪುವ ಅವಕಾಶವಿದೆ.
ಬಾಂಗ್ಲಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ್ರೆ ಪಾಕ್ ಔಟ್:
ಒಂದು ವೇಳೆ ಬಾಂಗ್ಲಾ ಏನಾದ್ರು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆಮಾಡಿಕೊಂಡರೆ ಪಾಕಿಸ್ತಾನ ಟೂರ್ನಿಯಿಂದ ಹೊರಬೀಳಲಿದೆ.