ಲಂಡನ್:ವಿಶ್ವಕ್ರಿಕೆಟ್ನ ಬಲಿಷ್ಠ ತಂಡಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಒಂದು ತಂಡ ಎಂದರೆ ಅದು ದಕ್ಷಿಣ ಆಫ್ರಿಕಾ. ಆದರೆ ಈ ತಂಡಕ್ಕೆ ಅಂಟಿರುವ ಅದೊಂದು ಹೆಸರು ಮಾತ್ರ ಶಾಶ್ವತವಾಗಿ ಉಳಿಯಲಿದೆಯಾ ಎನ್ನುವ ಅನುಮಾನ ಮೂಡಿದೆ.
ದಕ್ಷಿಣ ಆಫ್ರಿಕಾ ತಂಡ ವಿಶ್ವಕಪ್ಗೂ ಮುನ್ನ ಅದೆಷ್ಟೇ ಅದ್ಭುತ ಪ್ರದರ್ಶನ ನೀಡಿದ್ದರೂ, ವರ್ಲ್ಡ್ಕಪ್ನಲ್ಲಿ ಮಾತ್ರ ನೀರಸ ಸಾಧನೆ ತೋರಿ 'ಚೋಕರ್ಸ್' ಎನ್ನುವ ಹಣೆಪಟ್ಟಿ ಹೊತ್ತುಕೊಂಡಿದೆ. ಈ ಬಾರಿಯ ವಿಶ್ವಕಪ್ನಲ್ಲಾದರೂ ಈ ಚೋಕರ್ಸ್ ಟ್ಯಾಗ್ಲೈನ್ ಬರದಂತೆ ಸಾಕಷ್ಟು ಎಚ್ಚರ ವಹಿಸಿದ್ದ ಫ್ಲೆಸಿಸ್ ಪಡೆ ಮತ್ತೆ ವಿಶ್ವಕಪ್ನಲ್ಲಿ ಸರಣಿ ಸೋಲು ಕಂಡಿದೆ.
ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದ ಮೂಲಕ ಈ ಬಾರಿಯ ವಿಶ್ವಕಪ್ ವಿಧ್ಯುಕ್ತವಾಗಿ ಆರಂಭವಾಗಿತ್ತು. ಪ್ರಥಮ ಪಂದ್ಯದಲ್ಲೇ ಆಫ್ರಿಕನ್ನರು ಬರೋಬ್ಬರಿ 104 ರನ್ಗಳಿಂದ ಪರಾಭವಗೊಂಡಿದ್ದರು. ನಂತರದಲ್ಲಿ ಎದುರಾಗಿದ್ದು ಬಾಂಗ್ಲಾದೇಶ ತಂಡ.
ಬಾಂಗ್ಲಾದೇಶವನ್ನು ಸುಲಭವಾಗಿ ಮಣಿಸಬಹುದು ಎಂದು ಲೆಕ್ಕಾಚಾರ ಹಾಕಿದ್ದ ಫ್ಲೆಸಿಸ್ ಪಡೆಗೆ ಬಾಂಗ್ಲಾ ಟೈಗರ್ಸ್ 21 ರನ್ಗಳಿಂದ ಸೋಲುಣಿಸುವ ಮೂಲಕ ಶಾಕ್ ನೀಡಿದ್ದರು. ಮೂರನೇ ಮ್ಯಾಚ್ನಲ್ಲಿ ಟೀಮ್ ಇಂಡಿಯಾ ಆರು ವಿಕೆಟ್ಗಳಿಂದ ದಕ್ಷಿಣ ಆಫ್ರಿಕಾವನ್ನು ಸೋಲಿಸಿತ್ತು. ವಿಂಡೀಸ್ ವಿರುದ್ಧದ ಪಂದ್ಯ ಮಳೆಯಿಂದ ರದ್ದಾಗಿತ್ತು. ಹೀಗಾಗಿ ನಾಲ್ಕನೇ ಪಂದ್ಯದಲ್ಲಿ ಮೈದಾನಕ್ಕಿಳಿಯದೇ ದಕ್ಷಿಣ ಆಫ್ರಿಕಾ ಅಂಕಪಟ್ಟಿಯಲ್ಲಿ ಖಾತೆ ತೆರೆದಿತ್ತು.
ದಕ್ಷಿಣ ಆಫ್ರಿಕಾ ಗೆಲುವ ಸಾಧಿಸಿದ್ದು ತನ್ನ ಐದನೇ ಪಂದ್ಯದಲ್ಲಿ ಎನ್ನುವುದು ವಿಶೇಷ. ಅದೂ ಸಹ ದುರ್ಬಲ ಅಫ್ಘಾನಿಸ್ತಾನವನ್ನು ಒಂಭತ್ತು ವಿಕೆಟ್ಗಳಿಂದ ಮಣಿಸಿ ಟೂರ್ನಿಯಲ್ಲಿ ಮೊದಲ ಜಯ ಸಾಧಿಸಿತ್ತು. ಬುಧವಾರ ನ್ಯೂಜಿಲ್ಯಾಂಡ್ ವಿರುದ್ಧ ಸಹ ಆಫ್ರಿಕನ್ನರು ಮತ್ತದೇ ಸೋಲಿನ ಸುಳಿಗೆ ಸಿಲುಕಿದರು.
ನ್ಯೂಜಿಲ್ಯಾಂಡ್ ವಿರುದ್ಧ ಕೊನೆ ಓವರ್ನಲ್ಲಿ ಸೋತ ಫ್ಲೆಸಿಸ್ ಪಡೆ ಈ ಬಾರಿಯ ವಿಶ್ವಕಪ್ನಲ್ಲೂ ಸೋಲನ್ನೇ ಕಾಣುತ್ತಿರುವ ದಕ್ಷಿಣ ಆಫ್ರಿಕಾ ತಂಡ ಚೋಕರ್ಸ್ ಟ್ಯಾಗ್ಲೈನ್ನಿಂದ ಹೊರಬಂದಿಲ್ಲ. ಕಪ್ ಗೆಲ್ಲುವ ಹಾದಿ ಪಂದ್ಯದಿಂದ ಪಂದ್ಯಕ್ಕೆ ದುರ್ಗಮಗೊಳ್ಳುತ್ತಿದೆ. ಮತ್ತೊಮ್ಮೆ ಚೋಕರ್ಸ್ ಹಣೆಪಟ್ಟಿ ಅಂಟಿಸಿಕೊಳ್ಳಲು ಸಿದ್ಧವಾಗುತ್ತಿರುವ ದಕ್ಷಿಣ ಆಫ್ರಿಕಾ ತಂಡಕ್ಕೆ ಈ ಪದ ಬಂದಿದ್ದೆಲ್ಲಿಂದ ಎನ್ನುವ ಮಾಹಿತಿ ಇಲ್ಲಿದೆ.
ಡಕ್ವರ್ತ್ ಹೆಸರಿನ ವಿಲನ್!
ನಿಷೇಧದ ಬಳಿಕ ಕ್ರಿಕೆಟ್ಗೆ ಕಂಬ್ಯಾಕ್ ಮಾಡಿದ್ದ ದಕ್ಷಿಣ ಆಫ್ರಿಕಾ 1992ರಲ್ಲಿ ಕಾಣಿಸಿಕೊಂಡಿತ್ತು. ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಆಫ್ರಿಕಾ ತಂಡ ಸೆಮೀಸ್ ಪ್ರವೇಶಿಸಿತ್ತು. ಇಂಗ್ಲೆಂಡ್ ತಂಡ ನೀಡಿದ 252 ರನ್ಗಳ ಗುರಿಯನ್ನು ಬೆನ್ನತ್ತುತ್ತಿದ್ದ ವೇಳೆ ಮಳೆರಾಯ ಎಂಟ್ರಿ ಕೊಟ್ಟಿದ್ದಾನೆ. ಆಮೇಲೆ ನಡೆದಿದ್ದು ವಿಶ್ವಕಪ್ ಇತಿಹಾಸ ಅತ್ಯಂತ ಕೆಟ್ಟ ಕ್ಲೈಮ್ಯಾಕ್ಸ್!
ಆ ಕಾಲದಲ್ಲಿ ಮಳೆ ಬಂದಾಗ ಪಂದ್ಯವನ್ನು ನಿಲ್ಲಿಸುವ ಅವಕಾಶ ಇರಲಿಲ್ಲ. ಟೆಲಿವಿಷನ್ ನಿಯಮದಂತೆ ಪಂದ್ಯವನ್ನು ನಿಲ್ಲಿಸಿ ಮಳೆ ನಿಲ್ಲುವವರೆಗೆ ಕಾಯುವಂತಿರಲಿಲ್ಲ. ಹೀಗಾಗಿ ಅಂಪೈರ್ ಓವರ್ ಕಡಿತ ಮಾಡಲು ನಿರ್ಧರಿಸಿದ್ದಾರೆ. 13 ಎಸೆತಕ್ಕೆ 22 ರನ್ ಬೇಕಿದ್ದ ಪಂದ್ಯ ಡಕ್ವರ್ತ್ ಲೂಯಿಸ್ ನಿಯಮದಲ್ಲಿ ಕಡಿತಗೊಂಡಾಗ ಆಗಿದ್ದು ಒಂದು ಎಸೆತಕ್ಕೆ 22 ರನ್! ಪಂದ್ಯ ಕೊನೆಗೊಂಡಾಗ ಕೇಳಿಬಂದಿದ್ದು ಚೋಕರ್ಸ್ ಎನ್ನುವ ಕೂಗು. ಈ ಕೂಗು ನಂತರದ ಬಹುತೇಕ ವಿಶ್ವಕಪ್ ಟೂರ್ನಿಯಲ್ಲಿ ಪುನರಾವರ್ತನೆಯಾಗುತ್ತಲೇ ಬಂತು.
1992ರ ವಿಶ್ವಕಪ್ನ ಕೊನೆಯ ಎಸೆತದ ಚಿತ್ರಣ ಈ ಪಂದ್ಯದ ಬಳಿಕ ಡಕ್ವರ್ತ್ ಲೂಯಿಸ್ ನಿಯಮದ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆಯಿತು. ನಿಯಮವನ್ನು ಸರಳಗೊಳಿಸುವಂತೆ ಸಾಕಷ್ಟು ಒತ್ತಾಯ ಬಂದಿತ್ತು. ಆದರೂ ಈ ನಿಯಮ ಇಂದಿಗೂ ಅದೆಷ್ಟೋ ಕ್ರಿಕೆಟಿಗರಿಗೆ ಹಾಗೂ ಕ್ರಿಕೆಟ್ ಫ್ಯಾನ್ಸ್ಗೆ ಅರ್ಥವಾಗದೆ ಕಗ್ಗಂಟಾಗಿಯೇ ಉಳಿದಿದೆ.
ಐತಿಹಾಸಿಕ ರನ್ಔಟ್!
1999ರ ವಿಶ್ವಕಪ್ನಲ್ಲಿ ದಕ್ಷಿಣ ಆಫ್ರಿಕಾ ಮತ್ತೆ ಸೆಮೀಸ್ಗೆ ಲಗ್ಗೆ ಇಟ್ಟಿತ್ತು. ಬಲಿಷ್ಠ ಆಸ್ಟ್ರೇಲಿಯಾದ ವಿರುದ್ಧ ಆಫ್ರಿಕನ್ನರು ಉಪಾಂತ್ಯಕ್ಕಾಗಿ ಸೆಣಸಾಟ ನಡೆಸಿದ್ದರು.
ಈ ಬಾರಿಯ ಸೆಮಿಫೈನಲ್ನಲ್ಲಿ ಆಫ್ರಿಕನ್ನರಿಗೆ 214 ರನ್ಗಳ ಗುರಿ ನೀಡಲಾಗಿತ್ತು. ಮೈಕೆಲ್ ಬೆವನ್ 65 ರನ್ ಸಿಡಿಸಿದ್ದರೆ ಅತ್ತ ಶಾನ್ ಪೊಲಾಕ್ 36 ರನ್ ನೀಡಿ 5 ವಿಕೆಟ್ ಕಿತ್ತಿದ್ದರು.
214 ರನ್ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾಗೆ ಕೊನೆಯ ಓವರ್ನಲ್ಲಿ ಒಂಭತ್ತು ರನ್ಗಳ ಅಗತ್ಯವಿರುತ್ತದೆ. ದಕ್ಷಿಣ ಆಫ್ರಿಕಾ ಕೈಯಲ್ಲಿದ್ದಿದ್ದು ಕೊನೆಯ ವಿಕೆಟ್. ಉತ್ತಮವಾಗಿ ಆಡುತ್ತಿದ್ದ ಕ್ಲೂಸ್ನರ್ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸುತ್ತಾರೆ. ಎರಡನೇ ಎಸೆತವೂ ಚೆಂಡು ಬೌಂಡರಿ ಗೆರೆ ದಾಟಿತ್ತು. ನಾಲ್ಕು ಎಸೆತದಲ್ಲಿ ಬೇಕಿದ್ದಿದ್ದು ಒಂಟಿ ರನ್. ಆದರೂ ಆಫ್ರಿಕನ್ನರ ವಿಶ್ವಕಪ್ ಪ್ರಯಾಣ ಇಲ್ಲೇ ಅಂತ್ಯವಾಗಿತ್ತು ಎನ್ನುವುದು ವಿಶೇಷ.
ಮೂರನೇ ಎಸೆತದಲ್ಲಿ ಯಾವುದೇ ರನ್ ಬರುವುದಿಲ್ಲ. ನಾಲ್ಕನೇ ಎಸೆತದಲ್ಲಿ ವಿಕೆಟ್ ನೇರಕ್ಕೆ ಬಾರಿಸುವ ಕ್ಲೂಸ್ನರ್ ಗೆಲುವಿನ ಓಟ ಕದಿಯುವ ಪ್ರಯತ್ನ ಮಾಡುತ್ತಾರೆ. ನಾನ್ ಸ್ಟ್ರೈಕ್ನಲ್ಲಿದ್ದ ಅಲನ್ ಡೊನಾಲ್ಡ್ ಕೊಂಚ ನಿಧಾನವಾಗಿ ಓಟ ಪಾರಂಭಿಸಿ ರನ್ ಔಟಾಗುತ್ತಾರೆ. ಪಂದ್ಯ ಟೈನಲ್ಲಿ ಅಂತ್ಯ ಕಮಡರೂ ಹಿಂದಿನ ಪಂದ್ಯ ಗೆದ್ದಿದ್ದರಿಂದ ಆಸ್ಟ್ರೇಲಿಯಾ ಉಪಾಂತ್ಯ ಪ್ರವೇಶಿಸುತ್ತದೆ.
ಡಕ್ವರ್ತ್ ಎನ್ನುವ ಬೆಂಬಿಡದ ಭೂತ:
2003ರ ವಿಶ್ವಕಪ್ನಲ್ಲಿ ಸೂಪರ್ ಸಿಕ್ಸ್ ಹಂತಕ್ಕೇರಲು ಗೆಲ್ಲಲೇಬೇಕಿದ್ದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಗೆ ಮಳೆರಾಯ ಸೋಲಿನ ರೂಪದಲ್ಲಿ ಎಂಟ್ರಿ ನೀಡಿದ್ದ. ಶ್ರೀಲಂಕಾ ನೀಡಿದ್ದ 269 ರನ್ಗಳ ಗುರಿಯನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ 6 ವಿಕೆಟ್ಗೆ 229 ರನ್ ಗಳಿಸಿದ್ದಾಗ ಮಳೆ ಆರಂಭವಾಗಿತ್ತು.
ಡಕ್ವರ್ತ್ ಲೂಯಿಸ್ ನಿಯಮವನ್ನು ಸಮೀಕರಿಸಿದಾಗ ಪಂದ್ಯವನ್ನು ಟೈ ಎಂದು ಘೋಷಿಸಲಾಯಿತು. ನಿಯಮದ ಪ್ರಕಾರ ದಕ್ಷಿಣ ಆಫ್ರಿಕಾಗೆ ಒಂದು ರನ್ ಗಳಿಸಿದ್ದರೆ ಗೆಲ್ಲಬಹುದಿತ್ತು. ಕೊನೆಯ ಎಸೆತ ಎದುರಿಸಿದ್ದ ಮಾರ್ಕ್ ಬೌಚರ್ ಯಾವುದೇ ರನ್ ಗಳಿಸಿರಲಿಲ್ಲ.
ತವರು ಹುಡುಗನಿಂದಲೇ ಚೂರಾಯ್ತು ವಿಶ್ವಕಪ್ ಕನಸು!
2015ರ ವಿಶ್ವಕಪ್ ಸೆಮಿ ಫೈನಲ್ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 281 ರನ್ ಉತ್ತಮ ಮೊತ್ತ ಗಳಿಸಿತ್ತು. ಮಳೆಯ ಕಾರಣದಿಂದ ಪಂದ್ಯವನ್ನು 43 ಓವರ್ಗೆ ಸೀಮಿತಗೊಳಿಸಲಾಗಿತ್ತು.
2015ರ ವಿಶ್ವಕಪ್ನಲ್ಲಿ ಕೊನೆಯ ಓವರ್ನಲ್ಲಿ ಸೋತ ಆಫ್ರಿಕನ್ನರು ಡಕ್ವರ್ತ್ ನಿಯಮದಂತೆ ಕಿವೀಸ್ಗೆ 298 ರನ್ಗಳ ಟಾರ್ಗೆಟ್ ನೀಡಲಾಗಿತ್ತು. ಕೊನೆಯ ಓವರ್ನಲ್ಲಿ ಕಷ್ಟಸಾಧ್ಯವಾದ 12 ರನ್ ಅಗತ್ಯವಿತ್ತು. ಡೇಲ್ ಸ್ಟೇನ್ ಕೊನೆಯ ಓವರ್ ಎಸೆಯಲು ಸಿದ್ಧರಾಗಿದ್ದರು. ಉತ್ತಮವಾಗಿ ಆಡುತ್ತಿದ್ದ ಗ್ರಾಂಟ್ ಎಲಿಯಟ್ ಮೊದಲ ನಾಲ್ಕು ಎಸೆತದಲ್ಲಿ ಏಳು ರನ್ ಕದಿಯುತ್ತಾರೆ. ಐದನೇ ಎಸೆತದಲ್ಲಿ ಎಲಿಯಟ್ ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಕಿವೀಸ್ ಪೈನಲ್ ಎಂಟ್ರಿ ನೀಡುತ್ತದೆ. ವಿಶೇಷವೆಂದರೆ ಇದೇ ದಕ್ಷಿಣ ಆಫ್ರಿಕಾದಲ್ಲಿ ಜನಿಸಿದ ಗ್ರಾಂಟ್ ಎಲಿಯಟ್ ತವರು ತಂಡಕ್ಕೇ ಕೊನೆಯಲ್ಲಿ ವಿಲನ್ ಆಗಿದ್ದು ನಿಜಕ್ಕೂ ಆ ದೇಶಕ್ಕೆ ಅರಗಿಸಿಕೊಳ್ಳಲಾಗದ ವಿಷಯ.
2019ರ ವಿಶ್ವಕಪ್ನಲ್ಲಿ ಈಗಾಗಲೇ ಆರು ಪಂದ್ಯದಲ್ಲಿ ನಾಲ್ಕನ್ನು ಸೋತು ಬಹುತೇಕ ಟೂರ್ನಿಯ ಅಂಚಿಗೆ ಬಂದು ನಿಂತಿದೆ. ಅತಿ ಜನಪ್ರಿಯ ಚೋಕರ್ಸ್ ಹಣೆಪಟ್ಟಿಯನ್ನು ಮತ್ತೆ ಅಂಟಿಸಿಕೊಂಡಿದೆ. ನಾಯಕರೂ ಬದಲಾದರೂ, ತಂಡ ಬದಲಾದರೂ ಚೋಕರ್ಸ್ ಟ್ಯಾಗ್ಲೈನ್ ಮಾತ್ರ ದಕ್ಷಿಣ ಆಫ್ರಿಕಾ ತಂಡವನ್ನು ಬಿಟ್ಟು ಹೋಗದಿರುವುದು ದೇಶದ ಕ್ರಿಕೆಟ್ ಫ್ಯಾನ್ಸ್ಗೆ ತೀವ್ರ ಬೇಸರ ತರಿಸಿದೆ.