ಲಂಡನ್:ಅಫ್ಘಾನಿಸ್ತಾನ ವಿರುದ್ಧ ಟೀಮ್ ಇಂಡಿಯಾ ಸುಲಭ ಜಯ ದಾಖಲಿಸಲಿದೆ ಎನ್ನುವ ಲೆಕ್ಕಾಚಾರ ಉಲ್ಟಾ ಮಾಡಿದ್ದ ಅಫ್ಘನ್ನರು ವಿರಾಟ್ ಪಡೆಯನ್ನು ಸೋಲಿನ ಸನಿಹ ತಂದು ನಿಲ್ಲಿಸಿದ್ದರು. ಈ ವೇಳೆ ಆಪತ್ಭಾಂಧವನಾಗಿ ಕಾಣಿಸಿಕೊಂಡ ವೇಗಿ ಶಮಿ ಹ್ಯಾಟ್ರಿಕ್ ಮೂಲಕ ಭಾರತಕ್ಕೆ ಗೆಲುವು ತಂದಿತ್ತಿದ್ದರು.
ಕೊನೆಯ ಓವರ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆಯುವ ಮೂಲಕ ಟೀಮ್ ಇಂಡಿಯಾಗೆ ಟೂರ್ನಿಯಲ್ಲಿ ನಾಲ್ಕನೇ ಗೆಲುವು ದಕ್ಕಿಸಿಕೊಟ್ಟ ಮೊಹಮ್ಮದ್ ಶಮಿ ತಮ್ಮ ಫಿಟ್ನೆಸ್ ಸಿಕ್ರೇಟ್ ರಿವೀಲ್ ಮಾಡಿದ್ದಾರೆ.
ಕಳೆದೊಂದು ವರ್ಷದಲ್ಲಿ ವೈಯಕ್ತಿಕ ಜೀವನದಲ್ಲಿ ಜರ್ಝರಿತರಾಗಿರುವ ಶಮಿ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿದ್ದರು. 2015ರ ವಿಶ್ವಕಪ್ನಲ್ಲಿ ಕಾಣಿಸಿಕೊಂಡಿದ್ದ ಶಮಿ, ಆ ಬಳಿಕ ಬೊಜ್ಜು ಹಾಗೂ ಗಾಯದ ಕಾರಣಗಳಿಂದ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದರು.
ವಿಶ್ವಕಪ್ನಲ್ಲಿ 32 ವರ್ಷಗಳ ನಂತರ ಹ್ಯಾಟ್ರಿಕ್ ವಿಕೆಟ್ ಪಡೆದ ಶಮಿ!
ಅಫ್ಘಾನಿಸ್ತಾನ ವಿರುದ್ಧ ಗೆಲುವು ಸಾಧಿಸಿದ ಬಳಿಕ ತಮ್ಮ ಫಿಟ್ನೆಸ್ ಬಗ್ಗೆ ಶಮಿ ಕುತೂಹಲಕಾರಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. "ಫಿಟ್ನೆಸ್ಗಾಗಿ ಕಳೆದ ಎರಡು ವರ್ಷದಿಂದ ದೇಹವನ್ನು ವಿವಿಧ ರೀತಿಯಲ್ಲಿ ದಂಡಿಸಿದ್ದೇನೆ. ಗಾಯದ ನಂತರ ಬೊಜ್ಜು ಬಂದಿತ್ತು. ತಂಡದಲ್ಲಿ ಇನ್ನಷ್ಟು ವರ್ಷ ಆಡಬೇಕಾದರೆ ದೇಹವನ್ನು ದಂಡಿಸುವ ಅನಿವಾರ್ಯವಿದೆ ಎನ್ನುವುದು ಈ ವೇಳೆ ನನ್ನ ಅರಿವಿಗೆ ಬಂದಿದೆ."
"ನನ್ನ ಆಹಾರದಲ್ಲಿ ಒಂದಷ್ಟು ಮಾರ್ಪಾಡು ಮಾಡಿಕೊಂಡೆ. ನಾನು ಡಯೆಟ್ ಮಾಡುತ್ತಿದ್ದೇನೆ ಎಂದಾಗ ಹಲವರು ನನ್ನ ನೋಡಿ ನಕ್ಕಿದ್ದರು. ಸಿಹಿತಿಂಡಿ ಹಾಗೂ ಬ್ರೆಡ್ಗಳಿಂದ ದೂರ ಉಳಿದೆ. ಇದು ನಿಜಕ್ಕೂ ದೊಡ್ಡ ಪರಿಣಾಮ ಬೀರಿತು" ಎಂದು ಮೊಹಮ್ಮದ್ ಶಮಿ ಹೇಳಿದ್ದಾರೆ.
ನನ್ನ ಪ್ಲಾನ್ ಅದೇ ಇತ್ತು; ಮಹಿ ಭಾಯ್ ಸಲಹೆಯೂ ಅದೇ! ರೋಚಕ ಕ್ಷಣ ಬಿಚ್ಚಿಟ್ಟ 'ಹ್ಯಾಟ್ರಿಕ್' ಹೀರೋ
ಟೀಮ್ ಇಂಡಿಯಾದ ಪ್ರಮುಖ ವೇಗಿ ಭುವನೇಶ್ವರ್ ಕುಮಾರ್ ಗಾಯಗೊಂಡಿದ್ದ ಕಾರಣ ಆ ಸ್ಥಾನಕ್ಕೆ ಶಮಿ ಆಯ್ಕೆಯಾಗಿದ್ದರು. ಈ ಬಗ್ಗೆ ಮಾತನಾಡಿದ ಶಮಿ, "ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ದೊರೆಯುವುದು ನಿಜಕ್ಕೂ ಅದೃಷ್ಟ. ಆದರೆ ಇಂತಹ ಅವಕಾಶಕ್ಕೆ ನಾನು ಕಾಯುತ್ತಲಿದ್ದೆ. ಈ ಅವಕಾಶವನ್ನು ಸಂಪೂರ್ಣವಾಗಿ ಬಳಿಸಿಕೊಳ್ಳಲು ಕಾಯುತ್ತಿದ್ದೆ. ಆದರೆ ವಿಶ್ವಕಪ್ನಲ್ಲಿ ಹ್ಯಾಟ್ರಿಕ್ ಪಡೆಯುವುದು ನಿಜಕ್ಕೂ ಅವಿಸ್ಮರಣೀಯ" ಎಂದಿದ್ದಾರೆ.