ಸೌತಮ್ಟನ್:ವಿಶ್ವಕಪ್ 2019ರ ಇಂಡೋ-ಆಫ್ಘನ್ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಕಿತ್ತು ತಂಡದ ಗೆಲುವಿಗೆ ಕಾರಣರಾದ ಮೊಹಮ್ಮದ್ ಶಮಿ ಆ ರೋಚಕ ಕ್ಷಣದ ಹಿಂದಿನ ಗುಟ್ಟು ಹೇಳಿದ್ದಾರೆ. ತನ್ನ ಆಲೋಚನೆಯಂತೆಯೇ, ಧೋನಿ ಸಲಹೆ ನೀಡಿದ್ದು ಗೆಲುವಿಗೆ ಕಾರಣವಾಯ್ತು ಎಂದಿದ್ದಾರೆ.
ಆ ರೋಚಕ ಕ್ಷಣದಲ್ಲಿ ನಾನು ಯಾರ್ಕರ್ ಬೌಲಿಂಗ್ ಮಾಡಲು ಯೋಚಿಸಿದ್ದೆ. ಮಹಿ ಭಾಯ್ ಸಲಹೆ ಕೂಡಾ ಅದೇ ಆಗಿತ್ತು. ಬೌಲಿಂಗ್ ಗತಿಯನ್ನು ಬದಲಿಸದೇ ಇದ್ದರೆ ಹ್ಯಾಟ್ರಿಕ್ ವಿಕೆಟ್ ಪಡೆಯುವ ಅದ್ಭುತ ಅವಕಾಶ ನಿನ್ನದು ಎಂದರು. ಇದು ತೀರಾ ಅಪರೂಪದ ಸನ್ನಿವೇಶ. ನಾನು ಅಂದುಕೊಂಡಿದ್ದನ್ನೇ ಅಂಗಣದಲ್ಲಿ ಮಾಡಿ ತೋರಿಸಿದೆ ಎಂದು ಪತ್ರಕರ್ತರಿಗೆ ಶಮಿ ಹೇಳಿದ್ದಾರೆ.
ಈ ಥರದ ಅವಕಾಶಗಳು ಸಿಗುವುದು ಅದೃಷ್ಟ. ಈ ಅವಕಾಶಗಳು ಬಂದಾಗ ನಾನು ಸಿದ್ಧನಿರುತ್ತೇನೆ. ವಿಶ್ವಕಪ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದು ವಿರಳ. ಈ ಬಗ್ಗೆ ನನಗೆ ಖುಷಿ ಇದೆ ಎಂದು ಹರ್ಷ ವ್ಯಕ್ತಪಡಿಸಿದರು.
ಕೊನೆಯ ಓವರ್ನಲ್ಲಿ ಯೋಚನೆ ಮಾಡುವಷ್ಟೂ ನನಗೆ ಸಮಯವಿರಲಿಲ್ಲ. ಹೆಚ್ಚು ಅವಕಾಶಗಳು ಇಲ್ಲದಾಗ ನಿಮ್ಮದೇ ಕೌಶಲ್ಯ ಬಳಸಿಕೊಳ್ಳಬೇಕು. ಹಲವು ರೀತಿಯಲ್ಲಿ ಯತ್ನಿಸಲು ಮುಂದಾದರೆ, ಎದುರಾಳಿ ಹೆಚ್ಚು ರನ್ ಗಳಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ ಬ್ಯಾಟ್ಸ್ಮನ್ ಮನಸ್ಥಿತಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳದಿದ್ದರೂ ನಾನು ನನ್ನ ಯೋಚನೆಯಲ್ಲಿದ್ದದ್ದನ್ನು ಅಷ್ಟೇ ಪ್ರಯೋಗಿಸಿದೆ ಎಂದರು.
ವಿಶ್ವಕಪ್ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಭಾರತದ 2ನೇ ಬೌಲರ್ ಎಂಬ ಹೆಗ್ಗಳಿಕೆಗೆ ಶಮಿ ಪಾತ್ರರಾಗಿದ್ದಾರೆ. 1987ರ ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಚೇತನ್ ಶರ್ಮ ಹ್ಯಾಟ್ರಿಕ್ ವಿಕೆಟ್ ಕಿತ್ತು ಇತಿಹಾಸ ಬರೆದಿದ್ದರು.