ಲಂಡನ್:ವಿಶ್ವಕಪ್ ಟೂರ್ನಿಯ ಬಲಿಷ್ಠ ತಂಡಗಳಲ್ಲಿ ಒಂದಾದ ದಕ್ಷಿಣ ಆಫ್ರಿಕಾ ಲೀಗ್ ಹಂತದಲ್ಲೇ ಟೂರ್ನಿಯಿಂದ ಹೊರಬಿದ್ದು ಕೋಟ್ಯಂತರ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.
ಭಾನುವಾರ ಪಾಕಿಸ್ತಾನ ವಿರುದ್ಧ 49 ರನ್ಗಳಿಂದ ಸೋಲುವ ಮೂಲಕ ದಕ್ಷಿಣ ಆಫ್ರಿಕಾ ಸೆಮಿಫೈನಲ್ ರೇಸ್ನಿಂದ ಹಿಂದೆ ಸರಿದಿದೆ. ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ತಂಡದ ನಾಯಕ ಫಫ್ ಡು ಪ್ಲೆಸಿಸ್, ವಿಶ್ವಕಪ್ನಲ್ಲಿ ಹಿನ್ನಡೆ ಅನುಭವಿಸಲು ಐಪಿಎಲ್ ಕಾರಣ ಎಂದು ಆರೋಪ ಮಾಡಿದ್ದಾರೆ.
ಪಾಕ್ ವಿರುದ್ಧ 49 ರನ್ಗಳ ಸೋಲು... ಸೆಮಿ ಫೈನಲ್ ರೇಸ್ನಿಂದ ಹೊರಬಿದ್ದ ದಕ್ಷಿಣ ಆಫ್ರಿಕಾ
"ದಕ್ಷಿಣ ಆಫ್ರಿಕಾ ತಂಡದ ಪ್ರಮುಖ ವೇಗಿ ಕಗಿಸೋ ರಬಾಡ ವಿಶ್ವಕಪ್ನಲ್ಲಿ ನೀರಸ ಪ್ರದರ್ಶನಕ್ಕೆ ಐಪಿಎಲ್ ನೇರ ಕಾರಣ. ಐಪಿಎಲ್ ನಲ್ಲಿ ರಬಾಡ ಆಡುವುದನ್ನ ತಡೆಯಲು ನಾನು ಹಾಗೂ ಟೀಮ್ ಮ್ಯಾನೇಜ್ಮೆಂಟ್ ಸಾಕಷ್ಟು ಪ್ರಯತ್ನಿಸಿದ್ದೆವು. ಆದರೆ, ರಬಾಡ ಐಪಿಎಲ್ನಲ್ಲಿ ಭಾಗವಹಿಸಿ ವಿಶ್ವಕಪ್ ವೇಳೆ ದೈಹಿಕವಾಗಿ ದಣಿದಿದ್ದರು. ಐಪಿಎಲ್ ಟೂರ್ನಿಯ ಅಂತ್ಯದಲ್ಲಿ ಗಾಯಗೊಂಡಿದ್ದರು, ಇದು ನಂತರದಲ್ಲಿ ವಿಶ್ವಕಪ್ ಮೇಲೆ ಪರಿಣಾಮ ಬೀರಿತು" ಎಂದು ಫ್ಲೆಸಿಸ್ ಪಾಕ್ ವಿರುದ್ಧ ಸೋಲಿನ ಬಳಿಕ ಮಾತನಾಡಿದ್ದಾರೆ.
"ಐಪಿಎಲ್ಗೂ ಮುನ್ನ ನಮ್ಮ ತಂಡದ ಆಟಗಾರರು ಮೂರು ಮಾದರಿಯ ಕ್ರಿಕೆಟ್ನಲ್ಲಿ ಸತತವಾಗಿ ತೊಡಗಿಸಿಕೊಂಡಿದ್ದರು. ಸಹಜವಾಗಿಯೇ ಎಲ್ಲ ಪ್ರಮುಖ ಆಟಗಾರರು ದೈಹಿಕ ಹಾಗೂ ಮಾನಸಿಕವಾಗಿ ಸಾಕಷ್ಟು ದಣಿದಿದ್ದರು. ಐಪಿಎಲ್ನಲ್ಲಿ ಭಾಗವಹಿಸಿದ್ದು ವಿಶ್ವಕಪ್ಗೆ ಮತ್ತಷ್ಟು ಹೊಡೆತ ನೀಡಿತು" ಎಂದು ದಕ್ಷಿಣ ಆಫ್ರಿಕ ನಾಯಕ ಹೇಳಿದ್ದಾರೆ.
ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸಿದ್ದ ರಬಾಡ 12 ಪಂದ್ಯಗಳಿಂದ 25 ವಿಕೆಟ್ ಪಡೆದು ತಂಡದ ನಿರ್ಣಾಯಕ ಆಟಗಾರನಾಗಿ ಕಾಣಿಸಿಕೊಂಡಿದ್ದರು.