ಕರ್ನಾಟಕ

karnataka

ETV Bharat / sports

ಮಿಂಚಿದ ವಾರ್ನರ್​, ಕಮ್ಮಿನ್ಸ್​... ಪಾಕ್​ಗೆ ಸೋಲುಣಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ ಆಸೀಸ್

ಕಳೆದ ಪಂದ್ಯದಲ್ಲಿ ಭಾರತದ ವಿರುದ್ಧ ಸೋಲು ಕಂಡಿದ್ದ ಆಸ್ಟ್ರೇಲಿಯಾ, ಜಯದ ಲಯಕ್ಕೆ ಮರಳಿದೆ. ಪಾಕ್​ಗೆ ಸೋಲುಣಿಸುವುದರೊಂದಿಗೆ ಟೂರ್ನಿಯಲ್ಲಿ 3ನೇ ಗೆಲುವು ಪಡೆದ ಆಸೀಸ್,​​ 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿತು.

ಪಾಕ್​ಗೆ ಸೋಲುಣಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ ಆಸೀಸ್

By

Published : Jun 13, 2019, 3:29 AM IST

ಟೌಂಟನ್​:ಡೇವಿಡ್​ ವಾರ್ನರ್ ಶತಕ​ ಹಾಗೂ ನಾಯಕ ಆ್ಯರೋನ್ ​ಫಿಂಚ್​ ಅವರ ಆಕರ್ಷಕ ಅರ್ಧಶತಕದ ನೆರವಿಂದ ಪಾಕಿಸ್ತಾನದ ವಿರುದ್ಧ ಹಾಲಿ ಚಾಂಪಿಯನ್​ ಆಸ್ಟ್ರೇಲಿಯಾ 41 ರನ್​ಗಳ ಭರ್ಜರಿ ಜಯ ಸಾಧಿಸುವ ಮೂಲಕ ಗೆಲುವಿನ ಹಾದಿಗೆ ಮರಳಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆಸೀಸ್, ಡೇವಿಡ್ ವಾರ್ನರ್ ಶತಕ (107) ಹಾಗೂ ನಾಯಕ ಆ್ಯರೋನ್ ಫಿಂಚ್ (82)ರ ಅರ್ಧಶತಕದ ನೆರವಿನಿಂದ 49 ಓವರ್​ಗಳಲ್ಲಿ 307 ರನ್​ಗಳಿತು.

ಒಂದು ಹಂತದಲ್ಲಿ 350 ರನ್​ಗಳಿಸುವಂತಿದ್ದ ಆಸ್ಟ್ರೇಲಿಯ, ಮೊಹಮ್ಮದ್​ ಅಮೀರ್​ ದಾಳಿಗೆ ತತ್ತರಿಸಿ 307 ಕ್ಕೆ ಆಲೌಟ್​ ಆಯಿತು. ಮೊಹಮ್ಮದ್​ ಅಮೀರ್​ 10 ಓವರ್​ಗಳಲ್ಲಿ ಕೇವಲ 30 ರನ್​ ನೀಡಿ 5 ವಿಕೆಟ್​ ಪಡೆದರು. ಇವರಿಗೆ ಸಾಥ್​ ನೀಡಿದ ಶಾಹೀನ್​ ಆಫ್ರಿದಿ 2, ಹಫೀಜ್​, ರಿಯಾಜ್​ ಹಾಗೂ ಹಸನ್​ ಅಲಿ ತಲಾ ಒಂದು ವಿಕೆಟ್​ ಪಡೆದು ಮಿಂಚಿದರು.

ಆಸೀಸ್​ ನೀಡಿದ 308 ರನ್​ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ 3ನೇ ಓವರ್​ನಲ್ಲೇ ಫಾಖರ್​ ಜಮಾನ್​ ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಒಂದಾದ ಬಾಬರ್​(30) 2 ವಿಕೆಟ್​ಗೆ ಇಮಾಮ್​ ಜೊತೆಗೂಡಿ 54 ರನ್​ ಕಲೆಹಾಕಿದರು. 28 ಎಸೆತಗಳಲ್ಲಿ 7 ಬೌಂಡರಿ ಸಹಿತ 30 ರನ್​ಗಳಿಸಿದ್ದ ಬಾಬರ್​, ಕೌಲ್ಟರ್​ ನೈಲ್​ಗೆ ವಿಕೆಟ್​ ಒಪ್ಪಿಸಿದರು.

ಈ ಸಂದರ್ಭದಲ್ಲಿ ಇಮಾಮ್​ ಜೊತೆಗೂಡಿದ ಹಫೀಜ್,​ 2 ನೇ ವಿಕೆಟ್​ಗೆ 80 ರನ್​ಗಳ ಜೊತೆಯಾಟ ನೀಡಿದರು. 75 ಎಸೆತಗಳಲ್ಲಿ 7 ಬೌಂಡರಿ ಸಹಿತ 53 ರನ್​ಗಳಿಸಿದ್ದ ಇಮಾಮ್,​ ಪ್ಯಾಟ್​ ಕಮ್ಮಿನ್ಸ್​ ಓವರ್​ನಲ್ಲಿ ಕೀಪರ್​ಗೆ ಕ್ಯಾಚ್​ ನೀಡಿ ಔಟಾದರೆ, ಇವರ ಬೆನ್ನಲ್ಲೇ 46 ರನ್​ಗಳಿಸಿದ್ದ ಹಫೀಜ್, ಫಿಂಚ್​ ಸ್ಪಿನ್​ ಬಲೆಗೆ ಬಿದ್ದರು.

ನಂತರ ಬಂದ ಮಲಿಕ್​ ಸೊನ್ನೆ ಸುತ್ತಿದರೆ, ಆಸಿಫ್​ ಅಲಿ ಬಂದಷ್ಟು ಬೇಗನೇ ಮರಳಿ ಪೆವಿಲಿಯನ್​ ಸೇರಿಕೊಂಡರು. ಆದರೆ ನಾಯಕ ಸರ್ಫರಾಜ್​ ಜೊತೆಗೂಡಿ ಬೌಲರ್​ ಹಸನ್​ ಅಲಿ ಕೇವಲ 15 ಎಸೆತಗಳಲ್ಲಿ ತಲಾ 3 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 32 ರನ್​ಗಳಿಸಿ ಆಸೀಸ್​ ಪಾಳಯದಲ್ಲಿ ನಡುಕ ಹುಟ್ಟಿಸಿದರು. ಕೇನ್​ ರಿಚರ್ಡ್ಸನ್​ ಓವರ್​ನಲ್ಲಿ ಸಿಕ್ಸರ್​ ಎತ್ತುವ ಯತ್ನದಲ್ಲಿ ಎಡವಿದ ಹಸನ್,​ ಖವಾಜಾಗೆ ಕ್ಯಾಚ್​ ನೀಡಿ ಔಟಾದರು.

​ಇನ್ನೇನ್ನು ಗೆದ್ದೇ ಬಿಟ್ಟೆವು ಎಂದುಕೊಂಡಿದ್ದ ಆಸೀಸ್​ಗೆ ವಹಾಬ್​ ರಿಯಾಜ್​ ಹಾಗೂ ಸರ್ಫರಾಜ್​ ಮತ್ತೆ 8 ನೇ ವಿಕೆಟ್​ ಜೊತೆಯಾಟದಲ್ಲಿ 64 ರನ್​ ಜೊತೆಯಾಟ ನೀಡಿ ಮತ್ತೆ ಆಸೀಸ್​ಗೆ ತಲೆನೋವು ತಂದಿದ್ದರು. ಆದರೆ ಈ ಹಂತದಲ್ಲಿ ಆಸೀಸ್​ ಟ್ರಂಪ್​ಕಾರ್ಡ್​ ಸ್ಟಾರ್ಕ್​ ದಾಳಿಗಿಳಿದು, ಒಂದೇ ಓವರ್​ನಲ್ಲಿ 39 ಎಸೆತಗಳಲ್ಲಿ 2 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 45 ರನ್​ಗಳಿಸಿದ್ದ ರಿಯಾಜ್​ ವಿಕೆಟ್​ ಪಡೆಯುವಲ್ಲಿ ಯಶಸ್ವಿಯಾದರು. ಇನ್ನು ಅದೇ ಓವರ್​ನಲ್ಲಿ ಅಮೀರ್​ರನ್ನು ಕ್ಲೀನ್​ ಬೌಲ್ಡ್​ ಮಾಡಿ ಗೆಲುವನ್ನು ಖಚಿತ ಪಡಿಸಿದರು. 46 ನೇ ಓವರ್​ನಲ್ಲಿ ಸರ್ಫರಾಜ್​ ರನ್​ಔಟ್​ ಆಗುವುದರೊಂದಿಗೆ ಪಾಕಿಸ್ತಾನ ತಂಡ 266 ರನ್​ಗಳಿಗೆ ಸರ್ವಪತನಗೊಂಡಿತು.

ಆಕರ್ಷಕ ಬೌಲಿಂಗ್​ ಪ್ರದರ್ಶನ ನೀಡಿದ ಪ್ಯಾಟ್​ ಕಮ್ಮಿನ್ಸ್​ 3, ಸ್ಟಾರ್ಕ್​ 2, ಕೇನ್​ ರಿಚರ್ಡ್ಸನ್​ 2, ಕೌಲ್ಟರ್​ ನೈಲ್​ ಹಾಗೂ ಫಿಂಚ್​ ತಲಾ ಒಂದು ವಿಕೆಟ್​ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಪಾಕ್​ಗೆ ಸೋಲುಣಿಸುವುದರೊಂದಿಗೆ ಟೂರ್ನಿಯಲ್ಲಿ 3ನೇ ಗೆಲುವು ಪಡೆದ ಆಸೀಸ್,​​ 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿತು.

For All Latest Updates

TAGGED:

ABOUT THE AUTHOR

...view details