ಲಂಡನ್:2019ರ ವಿಶ್ವಕಪ್ ಹಲವು ಗೊಂದಲಗಳೊಂದಿಗೆ ಇಂಗ್ಲೆಂಡ್ ಪಾಲಾಗಿದೆ. ಆದರೆ, ಟೂರ್ನಿಯಲ್ಲಿ ಕೆಲವು ತಂಡಗಳ ಯುವ ಆಟಗಾರರು ವಿಶ್ವಕಪ್ನಲ್ಲಿ ನಿರೀಕ್ಷೆಗೂ ಮೀರಿ ಅದ್ಭುತ ಪ್ರದರ್ಶನ ತೋರುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಬದ್ರವಾಗಿ ನೆಲೆಯೂರುವ ಮುನ್ಸೂಚನೆ ನೀಡಿದ್ದಾರೆ.
ಸಿಕ್ಕ ಅವಕಾಶಗಳನ್ನು ಉಪಯೋಗಿಸಿಕೊಂಡು ಇದೇ ಮೊದಲ ಬಾರಿಗೆ ಐಸಿಸಿಯ ಟೂರ್ನಿಯಲ್ಲಿ ಆಡುವ 11ರ ಬಳಗದಲ್ಲಿ ಅವಕಾಶಗಿಟ್ಟಿಸಿಕೊಂಡು ತಂಡದ ಗೆಲುವಿಗೆ ಶ್ರಮಿಸಿದ ಕೆಲವು ಅಟಗಾರರ ವಿವಿರ ಇಲ್ಲಿದೆ.
ಶಾಹೀನ್ ಅಫ್ರಿದಿ
ಪಾಕಿಸ್ತಾನ ತಂಡದಲ್ಲಿ ಕಳೆದ ವರ್ಷಾಂತ್ಯದಲ್ಲಿ ಪದಾರ್ಪಣೆ ಮಾಡಿದ್ದ ಯುವ ಕ್ರಿಕೆಟಿಗ ಶಾಹೀನ್ ಅಫ್ರಿದಿ ವಿಶ್ವಕಪ್ನಲ್ಲಿ ಪಾಕಿಸ್ತಾನದ ಪರ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದರು. 19 ವರ್ಷದ ಶಾಹೀನ್ 5 ಪಂದ್ಯಗಳಲ್ಲಿ 16 ವಿಕೆಟ್ ಪಡೆದಿದ್ದರು. ಕೊನೆಯ ಲೀಗ್ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ 35 ರನ್ ನೀಡಿ 6 ವಿಕೆಟ್ ಪಡೆಯುವ ಮೂಲಕ ಪಾಕಿಸ್ತಾನದ ಪರ ವಿಶ್ವಕಪ್ನಲ್ಲಿ ಕಡಿಮೆ ರನ್ ನೀಡಿ 6 ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು.
ಮೊಹಮ್ಮದ್ ಸೈಫುದ್ದೀನ್
ಬಾಂಗ್ಲಾದೇಶದ 22 ವರ್ಷದ ಮೊಹಮ್ಮದ್ ಸೈಪುದ್ದೀನ್ ಅಂಡರ್ 19 ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ತೋರಿದ್ದ ನಂತರ ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅವಕಾಶ ಪಡೆದಿದ್ದರು. ಈ ವಿಶ್ವಕಪ್ನಲ್ಲಿ ಸೈಫುದ್ದೀನ್ 6 ಪಂದ್ಯಗಳಲ್ಲಿ 13 ವಿಕೆಟ್ ಪಡೆಯುವ ಮೂಲಕ ಮುಸ್ತಫಿಜುರ್ ನಂತರ ಹೆಚ್ಚು ವಿಕೆಟ್ ಪಡೆದ ಬಾಂಗ್ಲಾದೇಶ ಬೌಲರ್ ಎನಿಸಿಕೊಂಡರು. ಅಲ್ಲದೆ ಕೆಳಕ್ರಮಾಂಕದ ಬ್ಯಾಟಿಂಗ್ನಲ್ಲಿ ಆಕರ್ಷಕ ಇನ್ನಿಂಗ್ಸ್ ಕಟ್ಟಿದ್ದರು.
ಆವಿಶ್ಕಾ ಫರ್ನಾಂಡೋ
ಶ್ರೀಲಂಕಾದ 21 ವರ್ಷದ ಆವಿಶ್ಕಾ ಫರ್ನಾಂಡೋ ಎರಡು ವರ್ಷಗಳ ಹಿಂದೆ ಆಸ್ಟ್ರೆಲಿಯಾ ವಿರುದ್ಧ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರಾದರೂ ಹೇಳಿಕೊಳ್ಳುವ ಪ್ರದರ್ಶನ ನೀಡದ ಕಾರಣ ಮತ್ತೆ 2 ವರ್ಷಗಳ ತನಕ ತಂಡದಲ್ಲಿ ಅವಕಾಶ ಕಳೆದುಕೊಂಡಿದ್ದರು. ಇದೀಗ ಮತ್ತೆ ವಿಶ್ವಕಪ್ನಲ್ಲಿ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡು ಸಿಕ್ಕ 4 ಪಂದ್ಯಗಳಲ್ಲಿ 203 ರನ್ಗಳಿಸಿ ಮಿಂಚಿದರು. ವಿಂಡೀಸ್ ವಿರುದ್ಧ ಶತಕ ಸಿಡಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ನಿಕೋಲಸ್ ಪೂರನ್
ವೆಸ್ಟ್ ಇಂಡೀಸ್ ತಂಡದ 23 ವರ್ಷದ ಪೂರನ್ 8 ಇನ್ನಿಂಗ್ಸ್ಗಳಲ್ಲಿ 367 ರನ್ಗಳಿಸುವ ಮೂಲಕ ವಿಂಡೀಸ್ ಪರ ಗರಿಷ್ಠ ಸ್ಕೋರರ್ ಆಗಿದ್ದರು. ಇದೇ ವರ್ಷ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಪೂರನ್ ವಿಶ್ವಕಪ್ನಲ್ಲಿ ಒಂದು ಶತಕ ಹಾಗೂ 2 ಅರ್ಧಶತಕ ಸಿಡಿಸಿ ಮಿಂಚಿದ್ದು, ವಿಂಡೀಸ್ ತಂಡದಲ್ಲಿ ಖಾಯಂ ಸದಸ್ಯರಾಗಿದ್ದಾರೆ. ಅಲ್ಲದೆ ಇದೇ ವಿಂಡೀಸ್ ಮಂಡಳಿಯಿಂದ ವಾರ್ಷಿಕ ಗುತ್ತಿಯಲ್ಲೂ ಸ್ಥಾನಗಿಟ್ಟಿಸಿಕೊಂಡಿದ್ದಾರೆ.
ಜೋಫ್ರಾ ಆರ್ಚರ್
ವೆಸ್ಟ್ ಇಂಡೀಸ್ ಮೂಲದ ಜೋಫ್ರಾ ಆರ್ಚರ್ ಇಂಗ್ಲೆಂಡ್ ತಂಡಕ್ಕೆ ಇದೇ ವರ್ಷ ವಿಶ್ವಕಪ್ಗೂ ಮುನ್ನ ನಡೆದಿದ್ದ ಪಾಕಿಸ್ತಾನದ ವಿರುದ್ಧದ ಏಕದಿನ ಸರಣಿಯಲ್ಲಿ ಪದಾರ್ಪಣೆ ಮಾಡಿದ್ದರು. ಆಕಸ್ಮಿಕವಾಗಿ ವಿಶ್ವಕಪ್ನಲ್ಲಿ ಅವಕಾಶ ಪಡೆದ ಆರ್ಚರ್ 20 ವಿಕೆಟ್ ಪಡೆಯುವ ಮೂಲಕ 3ನೇ ಗರಿಷ್ಠ ವಿಕೆಟ್ ಟೇಕರ್ ಎಂಬ ದಾಖಲೆಗೆ ಪಾತ್ರರಾದರು. ಅಲ್ಲದೆ ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಪಡೆದ ಇಂಗ್ಲೆಂಡ್ ಬೌಲರ್ ಎಂಬ ಖ್ಯಾತಿಗೆ ಪಾತ್ರರಾದರು.
ಇವರಲ್ಲದೆ ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ, ದಕ್ಷಿಣ ಆಫ್ರಿಕಾದ ವ್ಯಾನ್ ಡರ್ ಡಾಸ್ಸೆನ್, ಪಾಕಿಸ್ತಾನದ ಹ್ಯಾರೀಸ್ ಸೊಹೈಲ್ ಕೂಡ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ 2019 ರ ವಿಶ್ವಕಪ್ನ ಉದಯೋನ್ಮುಖ ಆಟಗಾರರ ಸಾಲಿನಲ್ಲಿ ಕಂಡು ಬಂದಿದ್ದಾರೆ.