ಮೆಲ್ಬೋರ್ನ್: ಮೊದಲ ಪಂದ್ಯದಲ್ಲಿ ಅವಮಾನಕರ ಸೋಲಿನ ಬಳಿಕ ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ಕಠಿಣ ಸವಾಲವನ್ನು ಸ್ವೀಕರಿಸಬೇಕಾಗಿದ್ದು, ಎಂಸಿಜೆಯಲ್ಲಿ ಟೀಂ ಇಂಡಿಯಾ ಆಟಗಾರರು ಕಠಿಣ ಅಭ್ಯಾಸ ನಡೆಸಿದ್ದಾರೆ.
ಟೆಸ್ಟ್ ಇತಿಹಾಸದಲ್ಲಿ ಅತ್ಯಂತ ಕಡಿಮೆ ಮೊತ್ತಕ್ಕೆ(36) ಆಲೌಟ್ ಆಗಿದ್ದ ಭಾರತ ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ 8 ವಿಕೆಟ್ಗಳ ಸೋಲು ಕಂಡಿದ್ದು, ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ 1-0ಯಲ್ಲಿ ಹಿನ್ನಡೆ ಅನುಭವಿಸಿದೆ.
ಭಾರತ ತಂಡದಿಂದ 2ನೇ ಟೆಸ್ಟ್ಗೆ ಅಭ್ಯಾಸ ಇದೀಗ ಡಿಸೆಂಬರ್ 26ರಂದು ಬಾಕ್ಸಿಂಗ್ ಡೇ ಟೆಸ್ಟ್ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಈ ಟೆಸ್ಟ್ ಪಂದ್ಯಕ್ಕೆ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಭವಿ ಬೌಲರ್ ಮೊಹಮ್ಮದ್ ಶಮಿ ಗೈರಾಗಲಿದ್ದಾರೆ. ರಹಾನೆ ನಾಯಕನ ಸ್ಥಾನ ತುಂಬಿದರೆ, ಸಿರಾಜ್ ಅಥವಾ ಸೈನಿ 2ನೇ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡುವ ನಿರೀಕ್ಷೆಯಿದೆ.
ರಹಾನೆ ಮುಂದೆ ನಂಬಲಸಾಧ್ಯವಾದ ಸವಾಲಿದ್ದು, ಆಘಾತಕಾರಿ ಸೋಲಿನ ಬಳಿಕ ತಂಡವನ್ನು ಮೇಲೆತ್ತುವ ಕೆಲಸ ಮಾಡಬೇಕಿದೆ. ಅದರಲ್ಲೂ ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡವನ್ನು ಎದುರಿಸುವುದು ನಿಜಕ್ಕೂ ಮುಂಬೈಕರ್ಗೆ ಕಠಿಣ ಸವಾಲಾಗಲಿದೆ.
ಆಸ್ಟ್ರೇಲಿಯಾ ವಿರುದ್ಧದ ಎರಡನೇ ಪಂದ್ಯಕ್ಕೆ ಸಾಕಷ್ಟು ಸಮತೋಲನವುಳ್ಳ ತಂಡವನ್ನು ಆಯ್ಕೆ ಮಾಡುವುದು ಟೀಂ ಮ್ಯಾನೇಜ್ಮೆಂಟ್ಗೆ ತಲೆನೋವಾಗಲಿದೆ. ಯುವ ಬ್ಯಾಟ್ಸ್ಮನ್ ಪೃಥ್ವಿ ಶಾ ತಂಡದಿಂದ ಹೊರಬಿದ್ದರೆ, ಅನುಭವಿ ಕೆ.ಎಲ್.ರಾಹುಲ್ ಮತ್ತು ರವೀಂದ್ರ ಜಡೇಜಾ ತಂಡದ ಭಾಗವಾಗುವ ನಿರೀಕ್ಷೆಯಿದೆ.
ಗುರುವಾರ ಗಾಯದಿಂದ ಚೇತರಿಸಿಕೊಂಡಿರುವ ಜಡೇಜಾ ಬೌಲಿಂಗ್ ಮತ್ತು ಬ್ಯಾಟಿಂಗ್ ಅಭ್ಯಾಸ ನಡೆಸಿದ್ದಾರೆ. ಇವರ ಜೊತೆ ಪೂಜಾರ, ಶುಬ್ಮನ್ ಗಿಲ್ ಕೂಡ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿರುವ ವಿಡಿಯೋವನ್ನು ಬಿಸಿಸಿಐ ತನ್ನ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದೆ.