ಬರ್ಮಿಂಗ್ಹ್ಯಾಮ್: ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಶತಕಗಳಿಸಿದ ರೋಹಿತ್ ಹಾಗೂ 4 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಬುಮ್ರಾಗಿಂತ ಹೆಚ್ಚು ಮಿಂಚಿದ್ದ ಅಜ್ಜಿಯನ್ನು ಕೊಹ್ಲಿ ಹಾಗೂ ರೋಹಿತ್ ಭೇಟಿ ಮಾಡಿ ಮಾತನಾಡಿಸಿದ್ದಾರೆ.
ಮಂಗಳವಾರ ಬರ್ಮಿಂಗ್ಹ್ಯಾಮ್ನಲ್ಲಿ ಬಾಂಗ್ಲಾದೇಶದ ವಿರುದ್ಧ ಟೀಮ್ ಇಂಡಿಯಾ 28 ರನ್ಗಳ ಜಯ ಸಾಧಿಸಿತ್ತು. ಈ ರೋಹಿತ್ ಶತಕ ಸಿಡಿಸಿ ಮಿಂಚಿದರೆ, ಯಾರ್ಕರ್ ಕಿಂಗ್ ಬುಮ್ರಾ 4 ವಿಕೆಟ್ ಪಡೆದು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಈ ಪಂದ್ಯದವೇಳೆ ಸ್ಟೇಡಿಯಂನಲ್ಲಿ ಭಾರತ ತಂಡದ ಆಟಗಾರರಿಗಿಂತ ಭಾರತ ತಂಡವನ್ನು ಬೆಂಬಲಿಸಲು ಬಂದಿದ್ದ 87 ವರ್ಷದ ಚಾರುಲತಾ ಪಟೇಲ್ ವಿಶ್ವದ ಗಮನ ಸೆಳೆದಿದ್ದರು. ಪಂದ್ಯದ ಮಧ್ಯೆ ಈ ಅಜ್ಜಿಯನ್ನು ತೋರಿಸುವ ಮೂಲಕ ಆ ಅಜ್ಜಿಯನ್ನು ಸ್ಟಾರ್ ಮಾಡಲಾಗಿತ್ತು.
ಪಂದ್ಯಕ್ಕೂ ಮುನ್ನ ಮಾತನಾಡಿದ್ದ ಚಾರುಲತಾ ಅಜ್ಜ್ಜಿ, ಈ ಬಾರಿ ವಿಶ್ವಕಪ್ ಭಾರತ ಗೆಲ್ಲಲಿದೆ. ನಾನು ದೇವರಲ್ಲಿ ಭಾರತವೇ ಗೆಲ್ಲಲಿ ಎಂದು ಬೇಡಿಕೊಂಡಿರುವೆ ಎಂದು ಮಾಧ್ಯಮದ ಜೊತೆ ಮಾತನಾಡಿದ್ದರು. ಪಂದ್ಯ ಮುಗಿದ ನಂತರ ಈ ಹಿರಿಯ ಜೀವವನ್ನು ನಾಯಕ ಕೊಹ್ಲಿ ಹಾಗೂ ಉಪನಾಯಕ ರೋಹಿತ್ ಶರ್ಮಾ ಭೇಟಿ ಮಾಡಿ ಅಜ್ಜಿಜೊತೆ ಕೆಲ ಸಮಯ ಕಳೆಯುವ ಮೂಲಕ ಕೋಟ್ಯಾಂತರ ಅಭಿಮಾನಿಗಳ ಹೃದಯ ಗೆದ್ದರು.
ಪಂದ್ಯ ಮುಗಿಯುತ್ತಿದ್ದಂತೆ ಅಜ್ಜಿ ಬಳಿ ತೆರಳಿದ ಪಂದ್ಯಶ್ರೇಷ್ಠ ರೋಹಿತ್ ಶರ್ಮಾ ಹಾಗೂ ಕೊಹ್ಲಿ ಪ್ರೀತಿಯಿಂದ ಅಜ್ಜಿ ಜೊತೆ ಮಾತನಾಡಿದರು. ತಂಡದ ಈ ಇಬ್ಬರನ್ನ ನೋಡಿ ಖುಷಿಪಟ್ಟ ಚಾರುಲತಾ ಅಜ್ಜಿ ಇಬ್ಬರಿಗೂ ಸಿಹಿಮುತ್ತು ನೀಡಿ ವಿಶ್ವಕಪ್ ಗೆಲ್ಲುವಂತೆ ಆಶಿರ್ವಾದ ಮಾಡಿದರು.