ನವದೆಹಲಿ:ರನ್ ಮಷಿನ್ ಖ್ಯಾತಿಯ ವಿರಾಟ್ ಕೊಹ್ಲಿ ತಮ್ಮ ವೃತ್ತಿ ಜೀವನದ ಆರಂಭದಲ್ಲಿ ತನ್ನ ಆಯ್ಕೆಗಾಗಿ ಅಧಿಕಾರಿಯೊಬ್ಬ ಲಂಚದ ಬೇಡಿಕೆಯಿಟ್ಟಿದ್ದ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಇಂದು ಕೊಹ್ಲಿ ವಿಶ್ವ ಶ್ರೇಷ್ಠ ಬ್ಯಾಟ್ಸ್ಮನ್ ಆಗಿರಬಹುದು. ಆದರೆ, ಅವರ ಆರಂಭದ ವೃತ್ತಿಜೀವನ ಹೂವಿನ ಹಾಸಿಗೆಯಂತಿರಲಿಲ್ಲ. ಅವರು ಉತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ಅಂದು ರಣಜಿ ತಂಡಕ್ಕೆ ಆಯ್ಕೆಯಾಗದಿದ್ದಕ್ಕೆ ಕಣ್ಣೀರಿಟ್ಟಿದ್ದರ ಬಗ್ಗೆ ತಿಳಿಸಿದ್ದಾರೆ. ದೆಹಲಿ ಜೂನಿಯರ್ ತಂಡಕ್ಕೆ ಆಯ್ಕೆಯಾಗಲು ಅಧಿಕಾರಿಯೊಬ್ಬ ಲಂಚ ಕೇಳಿದ್ದ ಎಂಬ ವಿಚಾರವನ್ನು ಬಿಚ್ಚಿಟ್ಟಿದ್ದಾರೆ.
ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ ಜೊತೆಗೆ ನಡೆಸಿದ ಇನ್ಸ್ಟಾಗ್ರಾಮ್ ಲೈವ್ನಲ್ಲಿ ಮಾತನಾಡಿದ ಕೊಹ್ಲಿ, ತಮ್ಮ ತಂದೆ ಲಂಚ ಕೊಡದ ಕಾರಣ ತಾನು ರಾಜ್ಯ ಜೂನಿಯರ್ ತಂಡಕ್ಕೆ ಆಯ್ಕೆಯಾಗಿರಲಿಲ್ಲ ಎಂಬ ಕಹಿ ಘಟನೆಯನ್ನು ನೆನೆದಿದ್ದಾರೆ ಕೊಹ್ಲಿ.
"ನಾನು ಈಗಾಗಲೇ ಹಲವು ಬಾರಿ ಈ ವಿಚಾರವನ್ನು ಹೇಳಿದ್ದೇನೆ, ಒಂದು ಕಾಲದಲ್ಲಿ ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ ಸಾಕಷ್ಟು ಗೋಲ್ಮಾಲ್ಗಳು ನಡೆಯುತ್ತಿದ್ದವು. ಅಲ್ಲಿ ನಡೆಯುತ್ತಿದ್ದ ಕೆಲವು ಬೆಳವಣಿಗೆಗಳು ಒಳ್ಳೆಯದಾಗಿರಲಿಲ್ಲ. ನೀವು ಆಯ್ಕೆಯಾಗಲು ಉತ್ತಮ ಸಾಮರ್ಥ್ಯವಿದ್ದರೂ, ಆಯ್ಕೆಯಾಗಲು ಅರ್ಹತೆಗಿಂತ ಲಂಚ ಕೊಡಬೇಕಾದಂತಹ ಪರಿಸ್ಥಿತಿ ಅಲ್ಲಿತ್ತು" ಎಂದಿದ್ದಾರೆ.
ಆದರೆ ಕೊಹ್ಲಿ ತಂದೆ ಉತ್ತಮ ಆದರ್ಶಗಳನ್ನು ಹೊಂದಿದ್ದವರು, ಕಠಿಣ ಪರಿಶ್ರಮ ಪಡುತ್ತಿದ್ದರು ಹಾಗೂ ಬೀದಿ ದೀಪದ ಕೆಳಗೆ ಓದಿ ತಮ್ಮ ಜೀವನ ರೂಪಿಸಿಕೊಂಡವರಾಗಿದ್ದರು. "ಜೀವನದಲ್ಲಿ ಅಡ್ಡದಾರಿಯನ್ನು ಹಿಡಿಯಲು ಇಷ್ಟವಿಲ್ಲದ ನಮ್ಮ ತಂದೆ ಲಂಚ ನೀಡಲು ನಿರಾಕರಿಸಿದ್ದರು. ಅವನು(ವಿರಾಟ್) ಅವನಲ್ಲಿರುವ ಮೆರಿಟ್ ನಿಂದ ಕ್ರಿಕೆಟ್ ಆಡಿದರೆ ಒಳಿತು. ಇಲ್ಲವಾದರೆ ಅಡ್ಡದಾರಿಯಲ್ಲಿ ಹೋಗುವುದಾದರೆ ಬೇಡ" ಎಂದು ಕೋಚ್ ಬಳಿ ಹೇಳಿದ್ದರಂತೆ.
ನಾನು ಆಯ್ಕೆಯಾಗದಿರುವುದರಿಂದ ತುಂಬಾ ಕಣ್ಣೀರಿಟ್ಟಿದ್ದೆ. ನನ್ನ ಹೃದಯ ಛಿದ್ರ ಛಿದ್ರವಾಗಿತ್ತು ಎಂದು ಕೊಹ್ಲಿ ತಮ್ಮ ವೃತ್ತಿ ಜೀವನದ ಆರಂಭದ ಕಹಿ ಘಟನೆ ಬಗ್ಗೆ ವಿವರಿಸಿದ್ದಾರೆ.
ವಿರಾಟ್ ಕೊಹ್ಲಿ ಆರಂಭ ಕಹಿಯಾಗಿದ್ದರೂ ತಂದೆಯ ಆಶಯದಂತೆ ತಾನೊಬ್ಬ ಉತ್ತಮ ಕ್ರಿಕೆಟಿಗ ಎಂದು ನಿರೂಪಿಸಿದ್ದಾರೆ. ಇನ್ನು ತಂದೆ ಸಾವನ್ನಪ್ಪಿದ್ದರೂ ರಣಜಿ ಪಂದ್ಯದಲ್ಲಿ ತಮ್ಮ ತಂಡದ ಸೋಲನ್ನು ತಪ್ಪಿಸಲು ದಿನಪೂರ್ತಿ ಬ್ಯಾಟಿಂಗ್ ನಡೆಸಿದ್ದರು. ಸೋಲಿನತ್ತ ಸಾಗಿದ್ದ ಪಂದ್ಯವನ್ನು ಡ್ರಾ ಆಗುವಂತೆ ಮಾಡಿದ್ದರು.