ಬೆಂಗಳೂರು: ವಿಜಯ್ ಹಜಾರೆ ಟ್ರೋಫಿ ಕೊನೆಯ ಘಟ್ಟ ತಲುಪಿದ್ದು, ಇಂದು ಬೆಂಗಳೂರಿನ ಚಿನ್ನಸ್ವಾಮಿ ಮೈದಾನಲ್ಲಿ ಪ್ರಶಸ್ತಿ ಸುತ್ತಿನ ಸೆಣಸಾಟ ನಡೆಯಲಿದೆ.
ಲೀಗ್ ಹಂತದಲ್ಲಿ ಎದುರಾಳಿಗಳ ಮೇಲೆ ಸವಾರಿ ನಡೆಸಿದ್ದ ಮನೀಷ್ ಪಾಂಡೆ ನೇತೃತ್ವದ ಕರ್ನಾಟಕ ತಂಡ ಹಾಗೂ ದಿನೇಶ್ ಕಾರ್ತಿಕ್ ನಾಯಕತ್ವದ ತಮಿಳುನಾಡು ಫೈನಲ್ ಫೈಟ್ ನಡೆಸಲಿವೆ. ಈಗಾಗಲೇ ಟಾಸ್ ಗೆದ್ದಿರುವ ಕರ್ನಾಟಕ ಫೀಲ್ಡಿಂಗ್ ಆಯ್ದುಕೊಂಡಿದೆ.
ಪುದುಚೇರಿ ತಂಡವನ್ನು ಸೆಮೀಸ್ನಲ್ಲಿ ಸೋಲಿಸಿ ಅರ್ಹವಾಗಿಯೇ ಕರ್ನಾಟಕ ತಂಡ ಫೈನಲ್ಗೆ ಲಗ್ಗೆ ಇಟ್ಟಿತ್ತು. ಅತ್ತ ತಮಿಳುನಾಡು ಮಳೆ ಬಾಧಿತ ಪಂದ್ಯದಲ್ಲಿ ಅದೃಷ್ಟದ ಮೂಲಕ ಗುಜರಾತ್ ಸೋಲಿಸಿ ಉಪಾಂತ್ಯ ಪ್ರವೇಶಿಸಿದೆ. ಎರಡೂ ತಂಡದಲ್ಲಿ ಬಲಿಷ್ಠ ಆಟಗಾರರ ದಂಡೇ ಇದೆ. ಹೀಗಾಗಿ ಅಂತಿಮ ಸುತ್ತಿನ ಸೆಣಸಾಟ ರೋಚಕತೆಯಿಂದ ಕೂಡಿರಲಿದೆ. ಬೆಂಗಳೂರು ಪಿಚ್ ಎಂದಿನಂತೆ ಬ್ಯಾಟ್ಸ್ಮನ್ಗಳಿಗೆ ಪೂರಕವಾಗಿಯೇ ಇರಲಿದ್ದು, ರನ್ ಪ್ರಮಾಣ ಹೆಚ್ಚಿರಲಿದೆ. ಎರಡನೇ ಬ್ಯಾಟಿಂಗ್ ನಡೆಸುವ ತಂಡ ಗೆಲ್ಲುವ ಸಾಧ್ಯತೆ ಹೆಚ್ಚು.
ಹೇಗಿದೆ ನಮ್ಮ ಹುಡುಗ್ರ ತಂಡ?
ಅಂತಾರಾಷ್ಟ್ರೀಯ ಕ್ರಿಕೆಟ್ ಅನುಭವವಿರುವ ಕೆ.ಎಲ್.ರಾಹುಲ್, ಕರುಣ್ ನಾಯರ್, ಮನೀಷ್ ಪಾಂಡೆ, ಮಯಾಂಕ್ ಅಗರ್ವಾಲ್ ಜೊತೆಗೆ ಶ್ರೇಯಸ್ ಗೋಪಾಲ್, ದೇವದತ್ ಪಡಿಕ್ಕಲ್ ತಂಡಲ್ಲಿದ್ದಾರೆ.
ತಮಿಳುನಾಡಿನ ಬಲ ಏನು?
ತಮಿಳುನಾಡು ತಂಡದಲ್ಲೂ ಅಂತಾರಾಷ್ಟ್ರೀ ಕ್ರಿಕೆಟ್ ಅನುಭವಿರುವ ಆಟಗಾರರಿದ್ದಾರೆ. ನಾಯಕ ದಿನೇಶ್ ಕಾರ್ತಿಕ್, ವಿಜಯ್ ಶಂಕರ್, ಮುರಳಿ ವಿಜಯ್, ಆರ್.ಅಶ್ವಿನ್, ವಾಷಿಂಗ್ಟನ್ ಸುಂದರ್ ಮಾತ್ರವಲ್ಲದೆ ಬಾಬಾ ಅಪರಾಜಿತ್, ಅಭಿನವ್ ಮುಕುಂದ್, ಮುರುಗನ್ ಅಶ್ವಿನ್ ತಂಡದ ಶಕ್ತಿ.
ಕರ್ನಾಟಕ ತಂಡ ಈವರೆಗೆ ಮೂರು ಬಾರಿ ವಿಜಯ್ ಹಜಾರೆ ಪ್ರಶಸ್ತಿಗೆ ಮುತ್ತಿಕ್ಕಿದ್ದರೆ, ತಮಿಳುನಾಡು ಐದು ಬಾರಿ ಫೈನಲ್ ಗೆದ್ದು ಬೀಗಿದೆ. ಈ ಅಂಕಿಅಂಶ ನೆರೆ ರಾಜ್ಯದ ಪರವಾಗಿದ್ದರೂ ಅತ್ಯುತ್ತಮ ಆಟವೇ ಇಂದಿನ ಹಣಾಹಣಿಯ ವಿಜೇತರು ಯಾರೆಂದು ನಿರ್ಧರಿಸಲಿದೆ. ತ.ನಾಡು ಕೊನೆಯದಾಗಿ 2009-10 ಚಾಂಪಿಯನ್ ಆಗಿ ಹೊರಹೊಮ್ಮಿದ್ದರೆ, ಕರ್ನಾಟಕ 2017-18ರಲ್ಲಿ ಅಂತಿಮ ಸೆಣಸಾಟದಲ್ಲಿ ಗೆದ್ದಿತ್ತು.