ನವದೆಹಲಿ:ಭಾರತ ಕ್ರಿಕೆಟ್ ತಂಡದ ಬ್ಯಾಟಿಂಗ್ ಮಾಂತ್ರಿಕ ರಾಹುಲ್ ದ್ರಾವಿಡ್ ಅವರ ಒಂದು ಜಾಹೀರಾತು ಇಂಟರ್ನೆಟ್ನಲ್ಲಿ ಸಂಚಲನ ಸೃಷ್ಟಿಸಿದೆ. ಇದಕ್ಕೆ ಜನಸಾಮಾನ್ಯರಿಂದ ಹಿಡಿದು ಸ್ಟಾರ್ ನಟ, ಕ್ರಿಕೆಟಿಗರ ತನಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಭಾರತ ತಂಡದ ಮಾಜಿ ವೇಗದ ಬೌಲರ್ ಹಾಗೂ ಕನ್ನಡಿಗ ವೆಂಕಟೇಶ್ ಪ್ರಸಾದ್ ಕೂಡ ಇದಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿ, ಟ್ವೀಟ್ ಒಂದನ್ನು ಹಾಕಿದ್ದರು. ಅದಕ್ಕೆ ಪಾಕಿಸ್ತಾನದ ಪತ್ರಕರ್ತ ಕುಚೋದ್ಯವಾಡಿದ್ದ. ಈತನ ಉದ್ಧಟತನದ ಟ್ವೀಟ್ಗೆ ವೆಂಕಟೇಶ್ ಪ್ರಸಾದ್ ಉದಾಹರಣೆ ಸಹಿತ ಉತ್ತರ ನೀಡಿ, ಕೆಣಕಿದ ಪಾಕ್ ಪತ್ರಕರ್ತ ಬಾಯಿ ಮುಚ್ಚುವಂತಾಗಿದೆ.
ಲೆಗ್ ಕಟರ್ ಹಾಗೂ ಆಫ್ ಕಟರ್ಸ್ಗಳನ್ನು ಕರಗತ ಮಾಡಿಕೊಂಡಿದ್ದ ವಿಶ್ವದ ಕೆಲವೇ ಕೆಲವು ಬೌಲರ್ಗಳಲ್ಲಿ ಒಬ್ಬರಾದ ವೆಂಕಟೇಶ್ ಪ್ರಸಾದ್, ಭಾರತ ಕ್ರಿಕೆಟ್ ತಂಡಕ್ಕೆ 1994ರಲ್ಲಿ ಪದಾರ್ಪಣೆ ಮಾಡಿದ್ದರು. 1996ರ ವಿಶ್ವಕಪ್ನಲ್ಲಿ ಭಾರತ ತಂಡ ಸೆಮಿಫೈನಲ್ ಅವರು ಪ್ರವೇಶಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಅದೇ ಟೂರ್ನಿಯಲ್ಲಿ ಪಾಕಿಸ್ತಾನ ಬ್ಯಾಟ್ಸ್ಮನ್ ಅಮೀರ್ ಸೊಹೈಲ್ ಬೌಂಡರಿ ಬಾರಿಸಿ ವೆಂಕಟೇಶ್ ಪ್ರಸಾದ್ರನ್ನು ಹೀಯಾಳಿಸಿದ್ದರು. ಆದರೆ, ನಂತರದ ಎಸೆತದಲ್ಲಿ ಅವರನ್ನು ಬೌಲ್ಡ್ ಮಾಡುವ ಮೂಲಕ ಸೇಡು ತೀರಿಸಿಕೊಂಡಿದ್ದರು. ಇದು ಕ್ರಿಕೆಟ್ ಇತಿಹಾಸದಲ್ಲೇ ಅತ್ಯುತ್ತಮ ತಿರುಗೇಟು ನೀಡಿದ ಕ್ಷಣವಾಗಿದೆ. ನಿಜಕ್ಕೂ ವೆಂಕಿ ಆ ಬಾಲನ್ನು ಬೆಂಕಿಯಂತೆ ಎಸೆದಿದ್ದರು. ಈ ವಿಡಿಯೋ ಹಂಚಿಕೊಂಡು 'ಇಂದಿರಾ ನಗರ್ಕಾ ಗೂಂಡಾ ಹೂ ಮೇ' ಎಂದು ಹ್ಯಾಶ್ಟ್ಯಾಗ್ ಜೊತೆಗೆ ಹಂಚಿಕೊಂಡಿದ್ದರು.