ಅಹ್ಮದಾಬಾದ್: ಇಂಗ್ಲೆಂಡ್ ವಿರುದ್ಧ ಮೊದಲ ಟಿ-20 ಪಂದ್ಯದಲ್ಲಿ 8 ವಿಕೆಟ್ಗಳಿಂದ ಸೋಲನುಭವಿಸಿದ ಭಾರತ ತಂಡದ ಕಾಲೆಳೆದಿದ್ದ ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕಲ್ ವಾನ್ಗೆ ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ವಾಸೀಮ್ ಜಾಫರ್ ಟ್ವಿಟರ್ ಮೂಲಕವೇ ತಿರುಗೇಟು ನೀಡಿದ್ದಾರೆ.
ಶುಕ್ರವಾರ ಭಾರತ ತಂಡ ಕೇವಲ 124 ರನ್ ಗಳಿಸಿತ್ತು. ಈ ಮೊತ್ತವನ್ನು ಇಂಗ್ಲೆಂಡ್ 15.3 ಓವರ್ಗಳಲ್ಲಿ ತಲುಪಿ ಸುಲಭದ ಜಯ ಸಾಧಿಸಿತ್ತು. ಇದಕ್ಕೆ ಮೈಕಲ್ ವಾನ್ ಟ್ವಿಟರ್ನಲ್ಲಿ, "ಪ್ರಸ್ತುತ ಭಾರತ ಟಿ-20 ತಂಡಕ್ಕಿಂತ ಐಪಿಎಲ್‌ನ ಮುಂಬೈ ಇಂಡಿಯನ್ಸ್ ಅತ್ಯುತ್ತಮ ತಂಡ" ಎಂದು ಟ್ವೀಟ್ ಮಾಡಿದ್ದರು.
ವಾನ್ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಭಾರತದ ಮಾಜಿ ಬ್ಯಾಟ್ಸ್‌ಮನ್ ವಾಸೀಮ್ ಜಾಫರ್, "ಎಲ್ಲಾ ತಂಡಗಳಿಗೂ ನಾಲ್ಕು ವಿದೇಶಿ ಆಟಗಾರರೊಂದಿಗೆ ಆಡುವ ಅದೃಷ್ಟವಿಲ್ಲ" ಎಂದು ಬರೆದುಕೊಂಡು ತೀರುಗೇಟು ನೀಡಿದ್ದರು. ನಾಲ್ಕು ವಿದೇಶಿ ಆಟಗಾರರನ್ನು ಆಡಿಸುವ ಐಪಿಎಲ್ ಹೇಸರೇಳಿಕೊಂಡು ಇಂಗ್ಲೆಂಡ್ ತಂಡ ನಾಲ್ಕು ವಿದೇಶಿ ಆಟಗಾರರೊಂದಿಗೆ ಆಡುತ್ತಿದೆ ಎಂದು ಜಾಫರ್ ಪರೋಕ್ಷ ಟಾಂಗ್ ನೀಡಿದ್ದರು. ಇಂಗ್ಲೆಂಡ್ ತಂಡದಲ್ಲಿರುವ ಜೇಸನ್ ರಾಯ್ (ದಕ್ಷಿಣ ಆಫ್ರಿಕಾ), ಬೆನ್ ಸ್ಟೋಕ್ಸ್ (ನ್ಯೂಜಿಲೆಂಡ್), ಜೋಫ್ರಾ ಆರ್ಚರ್ (ಬಾರ್ಬಡೋಸ್ ) ಹಾಗೂ ಇಯಾನ್ ಮಾರ್ಗನ್ (ಐರ್ಲೆಂಡ್) ಮೂಲದವರಾಗಿದ್ದಾರೆ. ಇವರಲ್ಲದೆ ಸ್ಯಾಮ್ ಕರನ್, ರಶೀದ್ ಅವರ ಮೂಲ ಕೂಡ ವಿದೇಶಿಯಾಗಿದೆ.