ದುಬೈ:ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ವೃತ್ತಿ ಜೀವನಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟು, ತಮ್ಮ ಸಾಮರ್ಥ್ಯವನ್ನು ತೋರಿಸಲು ದಾರಿ ಮಾಡಿಕೊಟ್ಟಿದ್ದು, ಅಂಡರ್ 19 ವಿಶ್ವಕಪ್ ಎಂದು ದಶಕದ ಸಾಧನೆಯನ್ನು ನೆನೆದಿದ್ದಾರೆ.
2008ರಲ್ಲಿ ರವೀಂದ್ರ ಜಡೇಜಾ, ಮನೀಷ್ ಪಾಂಡೆ ಅವರನ್ನೊಳಗೊಂಡ ಅಂಡರ್ 19 ತಂಡದ ನಾಯಕನಾಗಿದ್ದ ವಿರಾಟ್ ಕೊಹ್ಲಿ ಅದ್ಭುತ ಆಲ್ರೌಂಡ್ ಪ್ರದರ್ಶನ ತೋರಿ ಭಾರತಕ್ಕೆ ಎರಡನೇ ವಿಶ್ವಕಪ್ ತಂದುಕೊಟ್ಟಿದ್ದರು.
ಆ ಸಮಯದಲ್ಲಿ ಯಶಸ್ವಿ ಮಧ್ಯಮ ವೇಗದ ಬೌಲರ್ ಆಗಿದ್ದ ಕೊಹ್ಲಿ ಸೆಮಿಫೈನಲ್ ಪಂದ್ಯದಲ್ಲಿ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ಸೇರಿದಂತೆ 27 ರನ್ ನೀಡಿ 2 ವಿಕೆಟ್ ಪಡೆದು ಭಾರತ ತಂಡ ಫೈನಲ್ಗೇರುವಂತೆ ಮಾಡಿದ್ದರು. ನಂತರ ಫೈನಲ್ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಭಾರತ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
"ಐಸಿಸಿ ಅಂಡರ್ 19 ವಿಶ್ವಕಪ್ ನನ್ನ ವೃತ್ತಿ ಜೀವನದಲ್ಲಿ ಪ್ರಮುಖ ಮೈಲಿಗಲ್ಲು" ಎಂದು ಆ ಟೂರ್ನಿಯಲ್ಲಿ 47 ಸರಾಸರಿಯಲ್ಲಿ 235 ರನ್ಗಳಿಸಿದ್ದ ವಿರಾಟ್ ಕೊಹ್ಲಿ ಐಸಿಸಿ ಬೆಬ್ಸೈಟ್ಗೆ ತಿಳಿಸಿದ್ದಾರೆ.
ಅಂಡರ್ 19 ವಿಶ್ವಕಪ್ ನಮ್ಮ ಕರಿಯರ್ ರೂಪಿಸಿಕೊಳ್ಳಲು ಪ್ರಮುಖ ವೇದಿಕೆ ಕಲ್ಪಿಸಿಕೊಟ್ಟಿತು. ಆದ್ದರಿಂದ ಅದು ನನ್ನ ಮನಸು ಮತ್ತು ಹೃದಯದಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿದೆ. ನಿಮಗಾಗಿ ಅವಕಾಶಗಳನ್ನು ಒದಗಿಸಿಕೊಟ್ಟದ್ದನ್ನು ಗೌರವಿಸಬೇಕಾಗುತ್ತದೆ ಎಂದು ಕೊಹ್ಲಿ ತಿಳಿಸಿದ್ದಾರೆ.
ಇದರ ಜೊತೆಗೆ ಕೊಹ್ಲಿ ನ್ಯೂಜಿಲ್ಯಾಂಡ್ನ ನಾಯಕ ಕೇನ್ ವಿಲಿಯಮ್ಸನ್ರನ್ನು ಹೊಗಳಿದ್ದು, ಆತನ ಬ್ಯಾಟಿಂಗ್ ಸಾಮರ್ಥ್ಯ ಇತರರಿಗಿಂತ ಅದ್ಭುತವಾಗಿದೆ. 2008ರ ಬ್ಯಾಚ್ನಲ್ಲಿ ಕೇನ್ ಹಾಗೂ ಸ್ಮಿತ್ ಅವರಂತಹ ಹಲವಾರು ಕ್ರಿಕೆಟಿಗರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಲು ಅವಕಾಶ ಪಡೆದರು ಎಂಬುದೇ ತುಂಬಾ ಒಳ್ಳೆಯ ವಿಚಾರ ಎಂದು ತಮ್ಮ ಹಳೆ ನೆನೆಪುಗಳನ್ನು ಮೆಲುಕು ಹಾಕಿದ್ದಾರೆ.