ಸೌತಾಂಪ್ಟನ್ :ಬರೋಬ್ಬರಿ 117 ದಿನಗಳ ನಂತರ ಪುನಾರಂಭಗೊಂಡಿದ್ದ ಕ್ರಿಕೆಟ್ ಪಂದ್ಯದಲ್ಲಿ 4 ವಿಕೆಟ್ಗಳ ರೋಚಕ ಜಯ ಸಾಧಿಸಿದ ವೆಸ್ಟ್ ಇಂಡೀಸ್ ತಂಡಕ್ಕೆ ವಿರಾಟ್ ಕೊಹ್ಲಿ, ಸೆಹ್ವಾಗ್, ಸಂಗಾಕ್ಕರ, ಬ್ರಿಯಾನ್ ಲಾರಾ, ಮೈಕಲ್ ವಾನ್ ಸೇರಿ ವಿಶ್ವದ ಮಹಾನ್ ಕ್ರಿಕೆಟಿಗರೆಲ್ಲರೂ ಶುಭ ಕೋರಿದ್ದಾರೆ.
ಸೌತಾಂಪ್ಟನ್ ರೋಸ್ಬೌಲ್ನಲ್ಲಿ ಬಯೋ ಸೆಕ್ಯೂರ್ ತಾಣದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಅತಿಥೇಯ ಇಂಗ್ಲೆಂಡ್ ವಿರುದ್ಧ 4 ವಿಕೆಟ್ಗಳ ರೋಚಕ ಜಯ ಸಾಧಿಸಿದೆ. ಇದು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಸಾಧಿಸಿದ ಮೊದಲ ಗೆಲುವಾಗಿತ್ತು.
ಇಂಗ್ಲೆಂಡ್ ತಂಡವನ್ನು ಅವರದ್ದೇ ನೆಲದಲ್ಲಿ ಬಗ್ಗು ಬಡಿದಿರುವ ವೆಸ್ಟ್ ಇಂಡೀಸ್ ತಂಡ ಹಾಗೂ ನಾಯಕ ಜೇಸನ್ರಿಗೆ ಭಾರತೀಯ ಕ್ರಿಕೆಟಿಗರು ಸೇರಿ ವಿಶ್ವದ ಹಲವಾರು ಕ್ರಿಕೆಟಿಗರು ಶುಭ ಕೋರಿದ್ದಾರೆ. ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ವಾವ್, ವಿಂಡೀಸ್ ತಂಡದಿಂದ ಅದ್ಭುತ ಗೆಲುವ, ಟೆಸ್ಟ್ ಕ್ರಿಕೆಟ್ನ ಅತ್ಯುತ್ತಮ ಪ್ರದರ್ಶನ' ಎಂದು ಟ್ವೀಟ್ ಮಾಡಿದ್ದಾರೆ.
ಭಾರತ ತಂಡದ ಲೆಜೆಂಡ್ ಸಚಿನ್ ತೆಂಡೂಲ್ಕರ್, "ಎರಡು ತಂಡಗಳು ಆಲ್ರೌಂಡ್ ಪ್ರದರ್ಶನ ತೋರಿವೆ. ಕಠಿಣ ಸಂದರ್ಭದಲ್ಲಿ ಜೆರ್ಮೈನ್ ಬ್ಲಾಕ್ವುಡ್ ಅದ್ಭುತ ಆಟ ಪ್ರದರ್ಶನ ನೀಡಿದರು. ಸರಣಿಯಲ್ಲಿ ಹಿಡಿತ ಸ್ಥಾಪಿಸಲು ವಿಂಡೀಸ್ಗೆ ಸರಿಯಾದ ಗೆಲುವು" ಎಂದು ಟ್ವೀಟ್ ಮಾಡಿದ್ದಾರೆ.
ವಿಂಡೀಸ್ ಲೆಜೆಂಡ್ ವಿವಿಯನ್ ರಿಚರ್ಡ್ಸ್, "ದೀರ್ಘ ಸಮಯದ ಬಳಿಕ ನಡೆದ ಪಂದ್ಯ ನಮ್ಮ ಪಾಲಾಗಿದೆ. ನಮ್ಮ ಹುಡುಗರಿಂದ ಉತ್ತಮ ಪ್ರದರ್ಶನ ಮೂಡಿ ಬಂದಿದೆ. ಈ ತಂಡ ಗೆಲುವು ಪಡೆಯಲು ಅರ್ಹತೆ ಹೊಂದಿದೆ. ಅಭಿನಂದನೆಗಳು ಹುಡುಗರೇ" ಎಂದಿದ್ದಾರೆ.
ಶ್ರೀಲಂಕಾದ ಲೆಜೆಂಡ್ ಕುಮಾರ್ ಸಂಗಾಕ್ಕಾರ, ಕ್ರಿಕೆಟ್‌ಗೆ ಮರಳಿದ ಬಳಿಕ ಎಂತಹ ಟೆಸ್ಟ್ ಪಂದ್ಯ ಇದು, ವಿಂಡೀಸ್ ತಂಡದಿಂದ ದೃಢ ನಿರ್ಧಾರ, ಬೆನ್ಸ್ಟೋಕ್ಸ್ ಹಾಗೂ ಜೇಸನ್ ಹೋಲ್ಡರ್ ತಾವಿಬ್ಬರು ಆದರ್ಶ ನಾಯಕರು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ಉಳಿದಂತೆ ಬ್ರಿಯಾನ್ ಲಾರಾ, ಇಂಗ್ಲೆಂಡ್ನ ಮೈಕಲ್ ವಾನ್, ಪಾಕಿಸ್ತಾನದ ಅಜರ್ ಮೊಹಮ್ಮದ್, ಭಾರತದ ವಿರೇಂದ್ರ ಸೆಹ್ವಾಗ್, ವಿವಿಎಸ್ ಲಕ್ಷ್ಮಣ್ ಸೇರಿ ವಿವಿಧ ದೇಶಗಳ ಕ್ರಿಕೆಟಿಗರು ಕೆರಿಬಿಯನ್ ತಂಡಕ್ಕೆ ಶುಭಕೋರಿದ್ದಾರೆ.