ನವದೆಹಲಿ:ವಿಂಡೀಸ್‌ನ ಮಾಜಿ ವೇಗಿ ಟಿನೊ ಬೆಸ್ಟ್ ತಮ್ಮ ಆರಂಭದ ದಿನಗಳಲ್ಲಿ ಭಾರತದೆದುರಿನ ಪಂದ್ಯದಲ್ಲಿ ರಾಹುಲ್ ದ್ರಾವಿಡ್ ಸತತ ಮೂರು ಬೌಂಡರಿ ಬಾರಿಸಿದ್ದ ಘಟನೆಯನ್ನು ಸ್ಮರಿಸಿದ್ದಾರೆ. ಆ ಪಂದ್ಯದ ನಂತರ ತಮ್ಮನ್ನು ಭೇಟಿಯಾಗಿದ್ದ ದ್ರಾವಿಡ್ ಹುರಿದುಂಬಿಸಿದ್ದರು ಎಂದು ಅವರು ತಿಳಿಸಿದ್ದಾರೆ.
ಭಾರತೀಯ ಕ್ರಿಕೆಟಿಗರು ತುಂಬಾ ಮೃದು ಸ್ವಭಾವದವರು. ರಾಹುಲ್ ದ್ರಾವಿಡ್ ಮತ್ತು ಇತರೆ ಹಲವು ಆಟಗಾರರು ವಿನಮ್ರತೆಯುಳ್ಳವರಾಗಿದ್ದರು ಎಂದು ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಅವರು ತಮಗೆ 1.5 ಬಿಲಿಯನ್ ಜನರ ಬೆಂಬಲವಿದೆ ಎಂಬ ಭಾವನೆಯಲ್ಲಿ ಇರುವುದಿಲ್ಲ. ಅದಕ್ಕೆ ನಾನು ಅವರನ್ನು ನಿಜವಾಗಿಯೂ ಮೆಚ್ಚುತ್ತೇನೆ. ಅವರಲ್ಲಿ ಯಾವುದೇ ರೀತಿಯಾ ದುರ್ವರ್ತನೆ ಇರಲಿಲ್ಲ. ಆಟದಲ್ಲಿ ಸದಾ ಗೌರವ ಮತ್ತು ಪ್ರೀತಿಯನ್ನು ತೋರಿಸುತ್ತಿದ್ದರು ಎಂದು ತಿಳಿಸಿದ್ದಾರೆ.
ಭಾರತದ ವಿರುದ್ಧ 2005ರಲ್ಲಿ ಇಂಡಿಯನ್ ಆಯಿಲ್ ಕಪ್ನಲ್ಲಿ ನಾನು ಮೊದಲ ಬಾರಿಗೆ ಆಡಿದ್ದೆ. ರಾಹುಲ್ ದ್ರಾವಿಡ್ ಅವರಿಗೆ ಈ ವೇಳೆ ನಾನು ಬೌಲಿಂಗ್ ಮಾಡಿದ್ದೆ. ಈ ಸಂದರ್ಭದಲ್ಲಿ ಅವರು ಸತತ ಮೂರು ಎಸೆತಗಳಿಗೆ ಬೌಂಡರಿ ಬಾರಿಸಿದ್ದರು. ನನಗಿನ್ನೂ ನೆನಪಿದೆ. ಈ ಪಂದ್ಯದ ಬಳಿಕ ನನ್ನ ಜೊತೆಗೆ ದ್ರಾವಿಡ್ ಸಣ್ಣ ಮಾತುಕತೆ ನಡೆಸಿ ಹುರಿದುಂಬಿಸಿದ್ದರು ಎಂದು 38 ವರ್ಷದ ಆಟಗಾರ ಹೇಳುತ್ತಾರೆ.
ಯಂಗ್ ಮ್ಯಾನ್, ನಿನ್ನ ಶಕ್ತಿ ಇಷ್ಟವಾಯಿತು. ಅದನ್ನು ಯಾವಾಗಲೂ ಕಾಯ್ದುಕೊಂಡಿರು. ಕೇವಲ ಬೌಂಡರಿಗಳನ್ನು ಬಾರಿಸಲ್ಪಟ್ಟೆ ಎಂಬ ಕಾರಣಕ್ಕೆ ನಿಲ್ಲಿಸಬೇಡ ಎಂದಿದ್ದರು. ನಾನು ಯಾವಾಗಲೂ ಭಾರತೀಯ ಕ್ರಿಕೆಟಿಗರಿಂದ ಸಾಕಷ್ಟು ಪ್ರೀತಿ ಗಳಿಸಿಕೊಂಡಿದ್ದೇನೆ. ಯುವರಾಜ್ ಸಿಂಗ್ ನನಗೆ ಅವರ ಬ್ಯಾಟ್ ನೀಡಿದ್ದರೆಂದು ವಿಂಡೀಸ್ ಮಾಜಿ ವೇಗಿ ತಿಳಿಸಿದ್ದಾರೆ.