ಬ್ರಿಸ್ಬೇನ್: ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ 7 ಮತ್ತು 8ನೇ ಕ್ರಮಾಂಕದ ಬ್ಯಾಟಿಂಗ್ ಬಂದು ಆಕರ್ಷಕ ಅರ್ಧಶತಕ ಸಿಡಿಸಿದ್ದಕ್ಕೆ ವಾಷಿಂಗ್ಟನ್ ಸುಂದರ್ ಹಾಗೂ ಶಾರ್ದೂಲ್ ಠಾಕೂರ್ ಅವರನ್ನು ಕ್ರಿಕೆಟ್ ಅಭಿಮಾನಿಗಳು ಹಾಗೂ ಮಾಜಿ ಕ್ರಿಕೆಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರೆ, ಅವರ ತಂದೆ ಎಂ. ಸುಂದರ್ ಮಾತ್ರ ಮಗ ಶತಕ ವಂಚಿತನಾಗಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
ಬಾರ್ಡರ್-ಗವಾಸ್ಕರ್ ಟ್ರೋಫಿ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಪಂದ್ಯದ 3ನೇ ದಿನದಂದು ವಾಷಿಂಗ್ಟನ್ ಸುಂದರ್ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದು 62 ರನ್ ಗಳಿಸಿದ್ದಲ್ಲದೆ, ಶಾರ್ದೂಲ್ ಠಾಕೂರ್ (67) ಅವರ ಜೊತೆಗೆ 8 ವಿಕೆಟ್ಗೆ 123 ರನ್ಗಳ ಜೊತೆಯಾಟ ನಡೆಸಿ ಆಸ್ಟ್ರೇಲಿಯಾದ ಬೌಲರ್ಗಳನ್ನು ಬೆವರಿಳಿಸಿದ್ದರು.
"ಅವನು (ವಾಷಿಂಗ್ಟನ್ ಸುಂದರ್) ಶತಕ ಸಿಡಿಸಲಾಗದಿದ್ದಕ್ಕೆ ನನಗೆ ತುಂಬಾ ಬೇಸರವಾಗಿದೆ. ಸಿರಾಜ್ ಬಂದಾಗ ಅವನು ಸಿಕ್ಸ್ ಮತ್ತು ಬೌಂಡರಿಗಳನ್ನು ಬಾರಿಸಬೇಕಿತ್ತು. ಆ ಸಾಮರ್ಥ್ಯ ಕೂಡ ಅವನಿಗಿತ್ತು. ಆದರೆ ಹಿನ್ನಡೆಯನ್ನು ಕಡಿಮೆ ಮಾಡಲು ಮತ್ತು ಆಸ್ಟ್ರೇಲಿಯಾ ಟೋಟಲ್ಗೆ ಹತ್ತಿರವಾಗಲು ಯೋಚಿಸಿದ್ದಾನೆ." ಎಂದು ವಾಷಿಂಗ್ಟನ್ ಸುಂದರ್ ತಂದೆ ಎಂ. ಸುಂದರ್ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.