ಅಹ್ಮದಾಬಾದ್ :ಮೊಟೆರಾದಲ್ಲಿ ಪಿಚ್ ಹೆಚ್ಚು ಟರ್ನಿಂಗ್ ಪಡೆಯುವ ನಿರೀಕ್ಷೆಯಿದೆ. ಆದರೆ, ಇಂಗ್ಲೆಂಡ್ ವಿರುದ್ಧದ ಹಗಲು-ರಾತ್ರಿ ಟೆಸ್ಟ್‌ನಲ್ಲಿ ವೇಗಿಗಳು ಸ್ಪಿನ್ನರ್ಗಳಂತೆ ದೊಡ್ಡ ಪಾತ್ರ ವಹಿಸಲಿದ್ದಾರೆ ಎಂಬ ನಿರೀಕ್ಷೆಯಲ್ಲಿರುವುದಾಗಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ತಿಳಿಸಿದ್ದಾರೆ.
4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಎರಡು ತಂಡಗಳು ತಲಾ ಒಂದು ಜಯ ಪಡೆದು ಸರಣಿಯಲ್ಲಿ 1-1ರಲ್ಲಿ ಸಮಬಲ ಸಾಧಿಸಿವೆ. ಬುಧವಾರ ನವೀಕರಣಗೊಂಡಿರುವ ಮೊಟೆರಾದಲ್ಲಿ ಮೂರನೇ ಟೆಸ್ಟ್ ಪಂದ್ಯ ನಡೆಯಲಿದೆ.
ಮೂರನೇ ಟೆಸ್ಟ್‌ನಲ್ಲಿ ಚೆಂಡು ಹೆಚ್ಚು ಸ್ವಿಂಗ್ ಆಗುವ ಸಾಧ್ಯತೆಯಿಲ್ಲವೇ ಎಂದು ಪತ್ರಿಕಾಗೋಷ್ಠಿಯಲ್ಲಿ ಕೊಹ್ಲಿಯನ್ನು ಪ್ರಶ್ನಿಸಿದಾಗ, ಚೆಂಡು ಉತ್ತಮ ನುಣುಪು ಮತ್ತು ಹೊಳೆಪನ್ನು ಹೊಂದಿರುವ ತನಕ ವೇಗಿಗಳು ಪ್ರಾಬಲ್ಯ ಸಾಧಿಸಲಬಲ್ಲರೆಂಬ ನಿರೀಕ್ಷೆಯಲ್ಲಿರುವುದಾಗಿ ತಿಳಿಸಿದ್ದಾರೆ.
ಇದನ್ನು ಓದಿ:ಅಶ್ವಿನ್ ಕ್ಲಾಸ್ ಪ್ಲೇಯರ್, ಆತ ವೈಟ್ಬಾಲ್ ಕ್ರಿಕೆಟ್ ಆಡದಿರುವುದು ದುರದೃಷ್ಟಕರ: ಗಂಭೀರ್
"ನಾನು ಚೆಂಡು ಸ್ವಿಂಗ್ ಆಗುವುದಿಲ್ಲ ಎಂದು ಭಾವಿಸುದಿಲ್ಲ. ಪಿಂಕ್ ಬಾಲ್, ರೆಡ್ ಬಾಲ್ಗಿಂತಲೂ ಹೆಚ್ಚು ಸ್ವಿಂಗ್ ಆಗುತ್ತದೆ. 2019ರಲ್ಲಿ ಮೊದಲ ಪಂದ್ಯವನ್ನಾಡಿದಾಗ ನಮಗೆ ಅನುಭವ ಆಗಿದೆ" ಎಂದು ಹೇಳಿದ್ದಾರೆ. ಒಂದು ವೇಳೆ ಪಿಚ್ ಪೇಸರ್ಗಳಿಗೆ ಅನುಕೂಲವಾದರೆ ಇಂಗ್ಲೆಂಡ್ ತಂಡ ಮೇಲುಗೈ ಸಾಧಿಸಲಿದೆ ಎಂಬ ಅಭಿಪ್ರಾಯವನ್ನು ಕೊಹ್ಲಿ ತಿರಸ್ಕರಿಸಿದ್ದಾರೆ.
ಇಂಗ್ಲೆಂಡ್ ತಂಡದ ಬಲ ಮತ್ತು ದೌರ್ಬಲ್ಯಗಳ ಬಗ್ಗೆ ನಾವು ಚಿಂತೆ ಮಾಡುವುದಿಲ್ಲ. ಪಿಚ್ ಅವರ ಬೌಲಿಂಗ್ಗೆ ಹೆಚ್ಚು ಅನುಕೂಲಕರವಾಗುವ ಅವರ ತವರಿನಲ್ಲೇ ನಾವು ಅವರನ್ನು ಮಣಿಸಿದ್ದೇವೆ. ಆದ್ದರಿಂದ ನಾವು ಪಿಚ್ ಅವರಿಗೆ ಅನುಕೂಲವಾಗಬಹುದು ಎಂಬುದರ ಬಗ್ಗೆ ತಲೆಕೆಸಿಡಿಸಿಕೊಳ್ಳುವುದಿಲ್ಲ. ನಾವು ಒಂದು ತಂಡವಾಗಿ ಉತ್ತಮವಾಗಿ ಆಡುವುದರ ಕಡೆಗೆ ಗಮನ ಹರಿಸುತ್ತೇವೆ ಎಂದಿದ್ದಾರೆ.
ಅದು ಸೀಮರ್ ಸ್ನೇಹಿ ಪಿಚ್ ಆಗಿದ್ದರೆ ನಮಗೂ ಕೂಡ ಅನುಕೂಲ. ನಮ್ಮ ತಂಡವೂ ಕೂಡ ವಿಶ್ವದ ಅತ್ಯುತ್ತಮ ಬೌಲಿಂಗ್ ದಾಳಿ ಹೊಂದಿದೆ. ಹಾಗಾಗಿ, ಚೆಂಡು ಯಾವ ರೀತಿ ವರ್ತಿಸುತ್ತದೆ ಎಂಬುದರ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ನಮ್ಮ ದಾರಿಗೆ ಬರುವ ಪ್ರತಿಯೊಂದನ್ನು ಎದುರಿಸಲು ಸಿದ್ಧರಾಗಿದ್ದೇವೆ ಎಂದು ಕೊಹ್ಲಿ ತಿಳಿಸಿದ್ದಾರೆ.
ರೋಹಿತ್ ಶರ್ಮಾ ಪಿಚ್ ಸ್ಪಿನ್ಗೆ ನೆರವು ನೀಡಲಿದೆ ಎಂದು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕೊಹ್ಲಿ, ಹೌದು ಸ್ಪಿನ್ ಖಂಡಿತ ಪ್ರಾಬಲ್ಯ ಸಾಧಿಸಲಿದೆ. ಆದರೆ, ಹೊಸ ಚೆಂಡಿನಲ್ಲಿ ಬೌಲಿಂಗ್ ಮಾಡುವ ವೇಗಿಗಳ ಸಾಮರ್ಥ್ಯ ಕಡೆಗಣಿಸಬಾರದು. ಪಿಂಕ್ ಬಾಲ್ ತನ್ನ ಹೊಳಪನ್ನು ಹೊಂದಿರುವವರೆಗೂ ವೇಗಿಗಳನ್ನು ಪಂದ್ಯದಲ್ಲಿ ಉಳಿಯುವಂತೆ ಮಾಡಲಿದೆ ಎಂದು ಹೇಳಿದ್ದಾರೆ.
ಇದನ್ನು ಓದಿ:ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನವೇ ಪಿಚ್ ಟರ್ನಿಂಗ್ ಕಾಣಲಿದೆ: ಖಚಿತಪಡಿಸಿದ ರೋಹಿತ್