ಮುಂಬೈ: ಮೊದಲೆರಡು ಪಂದ್ಯಗಳಲ್ಲಿ ಅಬ್ಬರಿಸಿ ಭಾರತೀಯ ಕ್ರಿಕೆಟ್ ವಲಯದಲ್ಲಿ ಭಾರಿ ಸದ್ದು ಮಾಡಿದ್ದ ಯುವ ಕ್ರಿಕೆಟಿಗ ಸಂಜು ಸಾಮ್ಸನ್ ನಂತರ ಮೂರು ಪಂದ್ಯಗಳಲ್ಲಿ ಒಂದಂಕಿ ಮೊತ್ತಕ್ಕೆ ಔಟಾಗಿದ್ದಾರೆ. ಸಾಮ್ಸನ್ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಸ್ಥಿರ ಪ್ರದರ್ಶನ ತೋರುವುದರಲ್ಲಿ ವಿಫಲರಾಗಿದ್ದಾರೆ. ಹಾಗಾಗಿ ಐಪಿಎಲ್ನಲ್ಲೂ ಅದನ್ನು ಮುಂದುವರಿಸಿದ್ದಾರೆ ಎಂದು ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಟೀಕಿಸಿದ್ದಾರೆ.
ಆರಂಭದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ 74 ರನ್ ನಂತರ ದಾಖಲೆಯ ಚೇಸಿಂಗ್ ವೇಳೆ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ದ 85 ರನ್ಗಳೊಂದಿಗೆ ಅಬ್ಬರಿಸಿದ್ದರು. ಆದರೆ ನಂತರ ಮೂರು ಪಂದ್ಯಗಳಲ್ಲಿ 8, 4 ಮತ್ತು 0 ರನ್ನುಗಳಿಗೆ ವಿಕೆಟ್ ಒಪ್ಪಿಸಿದರು. ಹೀಗಾಗಿಯೇ ಯುವ ಆಟಗಾರನ ಸಾಮರ್ಥ್ಯದ ಮೇಲೆ ಪ್ರಶ್ನೆಗಳೇಳುತ್ತಿವೆ.
ಮೂರು ಪಂದ್ಯಗಳಿಂದ ಎರಡಂಕಿ ಮೊತ್ತಗಳಿಸುವಲ್ಲಿ ವಿಫಲರಾಗಿರುವ ರಾಜಸ್ಥಾನ್ ರಾಯಲ್ಸ್ ಆಟಗಾರನ ವಿರುದ್ಧ ಮಾಜಿ ಕ್ರಿಕೆಟರ್ ಹಾಗು ವೀಕ್ಷಕ ವಿಶ್ಲೇಷಣೆಗಾರ ಸಂಜಯ್ ಮಂಜ್ರೇಕರ್ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಯಾವುದೇ ಆಟಗಾರನ ಸಾಮರ್ಥ್ಯವನ್ನು ನಿರ್ಣಯಿಸಬೇಕೆಂದರೆ ಮೊದಲು ಆತನ ಪ್ರಥಮ ದರ್ಜೆ ಕ್ರಿಕೆಟ್ ಅಂಕಿ ಅಂಶಗಳಗನ್ನು ಪರಿಶೀಲಿಸಬೇಕು. ಇದು ನನಗೆ ಸಾಮ್ಸನ್ ವಿಷಯದಲ್ಲಿ ಯಾವಾಗಲೂ ಕಾಡುತ್ತಿರುತ್ತದೆ. ಏಕೆಂದರೆ ಅವರ ಪ್ರಥಮ ದರ್ಜೆ ಕ್ರಿಕೆಟ್ ಸರಾಸರಿ 37 ಇದೆ. ಆದರೆ ಮಯಾಂಕ್ ಅಗರ್ವಾಲ್ 57 ಸರಾಸರಿ ಹೊಂದಿದ್ದರೆ, ಪಂಜಾಬ್ನ ಶುಬಮನ್ ಗಿಲ್ ಅವರು 21 ಪಂದ್ಯಗಳಲ್ಲಿ 73 ಸರಾಸರಿ ಹೊಂದಿದ್ದಾರೆ ಎಂದು ಮಂಜ್ರೇಕರ್ ಟ್ವೀಟ್ ಮಾಡಿದ್ದಾರೆ.
ಕೇರಳದ ಯುವ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಯಾವುದೇ ಮಾದರಿಯ ಕ್ರಿಕೆಟ್ನಲ್ಲಿ ಸ್ಥಿರ ಪ್ರದರ್ಶನ ತೋರುವಲ್ಲಿ ವಿಫರಾಗುತ್ತಿದ್ದಾರೆ. ಸಾಮ್ಸನ್ ವಿರುದ್ಧದ ಹೇಳಿಕೆಗೆ ಕೆಲವರು ಪರ ಮತ್ತು ಕೆಲವರು ವಿರುದ್ಧವಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡ ಮುಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ ವಿರುದ್ಧ ಕಣಕ್ಕಿಳಿಯಲಿದ್ದು, ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡುತ್ತಾರಾ? ಅನ್ನೋದನ್ನು ಕಾದು ನೋಡಬೇಕಿದೆ.