ಮ್ಯಾಂಚೆಸ್ಟರ್:ಎಂಎಸ್ ಧೋನಿ ವಿಶ್ವಕ್ರಿಕೆಟ್ನಿಂದ ನಿವೃತ್ತಿ ಅಂಚಿನಲ್ಲಿದ್ದು, ಅವರು ಕ್ರಿಕೆಟ್ಗೆ ವಿದಾಯ ಘೋಷಣೆ ಮಾಡುತ್ತಿದ್ದಂತೆ ಅವರ ಸ್ಥಾನಕ್ಕೆ ರಿಷಭ್ ಪಂತ್ ಫಿಕ್ಸ್ ಎಂಬ ಮಾತು ಹಿಂದಿನಿಂದಲೂ ಕೇಳಿ ಬರುತ್ತಿದೆ. ಆದರೆ ಅವರು ಬ್ಯಾಟಿಂಗ್ ಮಾಡುವ ರೀತಿ ನೋಡುತ್ತಿದ್ದರೆ ಎಂಎಸ್ ಸ್ಥಾನ ತುಂಬಬಲ್ಲರಾ? ಎಂಬ ಅನುಮಾನ ಕಾಡೋಕೆ ಶುರುವಾಗಿದೆ.
ಟೀಂ ಇಂಡಿಯಾ ಆಯ್ಕೆ ಸಮಿತಿ ಬೆಟ್ಟದಷ್ಟು ನಿರೀಕ್ಷೆಗಳೊಂದಿಗೆ ಉದಯೋನ್ಮುಖ ವಿಕೆಟ್ ಕೀಪರ್ ರಿಷಭ್ ಪಂತ್ಗೆ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿತ್ತು. ಆದರೆ ಪಂತ್ ಯಾವುದೇ ಪಂದ್ಯದಲ್ಲೂ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡದೇ ವಿಕೆಟ್ ಒಪ್ಪಿಸುತ್ತಿದ್ದಾರೆ. ಹೀಗಾದರೆ ಬರುವ ದಿನಗಳಲ್ಲಿ ಅವರು ಧೋನಿ ರೀತಿಯ ಪ್ರದರ್ಶನ ನೀಡಬಲ್ಲರಾ ಎಂಬ ಸಂಶಯ ಇದೀಗ ಕಾಡತೊಡಗಿದೆ.
ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ತಂಡ ಸಂಕಷ್ಟಕ್ಕೆ ಸಿಲುಕಿದ್ದ ವೇಳೆ ಬ್ಯಾಟ್ ಮಾಡಲು ಕ್ರೀಸಿಗಿಳಿದ ರಿಷಭ್ ಪಂತ್ 32ರನ್ಗಳಿಕೆ ಮಾಡಿ ಉತ್ತಮವಾಗಿ ಆಡುತ್ತಿದ್ದರು. ಆದರೆ ಈ ವೇಳೆ ದಿಢೀರ್ ಆಗಿ ದೊಡ್ಡ ಹೊಡೆತಕ್ಕೆ ಕೈಹಾಕಿ ವಿಕೆಟ್ ನೀಡಬೇಕಾಯಿತು. ತಂಡಕ್ಕೆ ವಿಕೆಟ್ ಕಾಯ್ದುಕೊಳ್ಳುವ ಅವಶ್ಯಕತೆಯಿದ್ದಾಗ ಇಂತಹ ದೊಡ್ಡ ಹೊಡೆತಕ್ಕೆ ಕೈ ಹಾಕುವ ಅವಶ್ಯಕತೆ ಇರಲಿಲ್ಲ ಎಂಬುದು ಕ್ರೀಡಾಭಿಮಾನಿಗಳ ಮಾತಾಗಿದೆ.
ವಿಶ್ವಕಪ್ನಲ್ಲಿ ಅವರು ಆಡಿರುವ ಯಾವುದೇ ಪಂದ್ಯದಲ್ಲೂ 50+ರನ್ಗಳಿಕೆ ಮಾಡಿಲ್ಲ. 30ರಿಂದ 40ರನ್ಗಳಿಕೆ ಮಾಡುತ್ತಿದ್ದಂತೆ ವಿಕೆಟ್ ಒಪ್ಪಿಸುತ್ತಿರುವ ರಿಷಭ್, ಇನ್ನು ಏಕದಿನ ಮಾದರಿ ಕ್ರಿಕೆಟ್ಗೆ ಹೊಂದಿಕೊಂಡಿಲ್ಲ ಎಂಬುದು ಕ್ರಿಕೆಟ್ ವಿಶ್ಲೇಷಕರ ಮಾತು.
ವಿಶ್ವಕಪ್ನಲ್ಲಿ ಬಾಂಗ್ಲಾ ವಿರುದ್ಧ 48ರನ್, ಶ್ರೀಲಂಕಾ ವಿರುದ್ಧ 4ರನ್ ಹಾಗೂ ಇಂದಿನ ಪಂದ್ಯದಲ್ಲಿ 32ರನ್ಗಳಿಕೆ ಮಾಡಿ ವಿಕೆಟ್ ಒಪ್ಪಿಸಿದ್ದಾರೆ. ಹಾಗಾಗಿ ಸಂದಿಗ್ಧ ಪರಿಸ್ಥಿತಿಯಲ್ಲಿ ಪಂತ್ ತಂಡವನ್ನು ಮುನ್ನಡೆಸಿ ಗೆಲವಿನ ದಡ ಸೇರಿಸುವ ಬಗ್ಗೆ ಸಹಜವಾಗೇ ಅನುಮಾನ ಎದ್ದಿದೆ.