ಮುಂಬೈ: ಟೀಂ ಇಂಡಿಯಾ ತಂಡದ ನೂತನ ಕೋಚ್ ಆಗಿ ಮತ್ತೊಂದು ಅವಧಿಗೆ ರವಿಶಾಸ್ತ್ರಿ ಪುನರಾಯ್ಕೆಯಾಗಿದ್ದು, ಇದೇ ವೇಳೆ, ತಮ್ಮ ಮುಂದಿನ ಪ್ಲಾನ್ ಬಗ್ಗೆ ಮುಕ್ತ ಮನಸಿನಿಂದ ಅವರು ಬಿಸಿಸಿಐ ಟಿವಿ ಜತೆ ಮಾತನಾಡಿದ್ದಾರೆ.
ತಮ್ಮ ಮೇಲೆ ನಂಬಿಕೆಯನ್ನಿಟ್ಟು ಇನ್ನೊಂದು ಅವಧಿಗೆ ಕೋಚ್ ಆಗಿ ಪುನರಾಯ್ಕೆ ಮಾಡಿದ್ದಕ್ಕಾಗಿ ಕಪಿಲ್ ದೇವ್ ನೇತೃತ್ವದ ಕ್ರಿಕೆಟ್ ಸಲಹಾ ಸಮಿತಿಯ ಸದಸ್ಯರಾದ ಅಂಶುಮನ್ ಗಾಯಕ್ವಾಡ್, ಶಾಂತಾ ರಂಗಸ್ವಾಮಿಗೆ ಕೃತಜ್ಞತೆ ಸಲ್ಲಿಕೆ ಮಾಡಿರುವ ಶಾಸ್ತ್ರಿ, ತಮ್ಮ ಮುಂದಿನ ಎರಡು ವರ್ಷದ ಯೋಜನೆಗಳ ಕುರಿತು ಮಾತನಾಡಿದ್ದಾರೆ.
ಮುಂದಿನ ಎರಡು ವರ್ಷಗಳಲ್ಲಿ ಟೀಂ ಇಂಡಿಯಾ ತಂಡಕ್ಕೆ ಯುವ ಪ್ಲೇಯರ್ಸ್ ಬರಲಿದ್ದು, ನಿಗದಿತ ಮಾದರಿ ಹಾಗೂ ಟೆಸ್ಟ್ನಲ್ಲೂ ಅವರು ಸೇರಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ. ಇನ್ನು ಮೂರರಿಂದ ನಾಲ್ವರು ಬೌಲರ್ಗಳ ಅವಶ್ಯಕತೆ ತಂಡಕ್ಕಿದ್ದು, ಮುಂದಿನ ದಿನಗಳಲ್ಲಿ ಅದು ಖಂಡಿತವಾಗಿ ಇಡೇರಲಿದೆ ಎಂದರು. ಈ ಹಿಂದೆ ನಮ್ಮಿಂದ ಆಗಿರುವ ತಪ್ಪುಗಳಿಂದ ನಾವು ಪಾಠ ಕಲಿತು ಮುಂದೆ ಸಾಗಬೇಕಾಗಿದೆ. ಕಳೆದ ಕೆಲ ವರ್ಷಗಳಿಂದ ನಮ್ಮ ತಂಡ ಕ್ರಿಕೆಟ್ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿದೆ. ಫಿಲ್ಡಿಂಗ್,ಬೌಲಿಂಗ್ ಹಾಗೂ ಬ್ಯಾಟಿಂಗ್ನಲ್ಲಿ ಉತ್ತಮ ಸುಧಾರಣೆ ಕಂಡು ಬಂದಿದೆ ಎಂದು ಅವರು ಹೇಳಿದ್ದಾರೆ.
ವಿದೇಶಗಳಲ್ಲೂ ನಮ್ಮ ತಂಡ ಉತ್ತಮ ಪ್ರದರ್ಶನ ನೀಡುತ್ತಿದ್ದು, ಮುಂದಿನ ಎರಡು ವರ್ಷಗಳಲ್ಲಿ ಖಂಡಿತವಾಗಿ ಇನ್ನಷ್ಟು ಬದಲಾವಣೆ ನಮ್ಮ ತಂಡದಲ್ಲಿ ಕಾಣಲಿದೆ. ಹೆಚ್ಚು ಹೆಚ್ಚು ಯುವಕರನ್ನ ತಂಡದಲ್ಲಿ ಸೇರಿಸಿಕೊಂಡು ಅವರಿಗೆ ಚಾನ್ಸ್ ನೀಡಲು ನಾವು ಮುಂದಾಗಿದ್ದೇವೆ ಎಂದು ತಿಳಿಸಿದ್ದಾರೆ.
ಟೀಂ ಇಂಡಿಯಾ ಈಗಾಗಲೇ ವೆಸ್ಟ್ ಇಂಡೀಸ್ ಪ್ರವಾಸದಲ್ಲಿದ್ದು, ತಾನಾಡಿರುವ ಟಿ-20 ಹಾಗೂ ಏಕದಿನ ಸರಣಿ ಈಗಾಗಲೇ ಕೈವಶ ಮಾಡಿಕೊಂಡಿದ್ದು, ಟೆಸ್ಟ್ ಸರಣಿಯಲ್ಲಿ ಭಾಗಿಯಾಗಲು ಉತ್ಸುಕವಾಗಿದೆ. ಇನ್ನು ನಿನ್ನೆ ಮುಂಬೈನಲ್ಲಿ ನಡೆದ ನೂತನ ಕೋಚ್ ಸಂದರ್ಶನದಲ್ಲಿ ರವಿಶಾಸ್ತ್ರಿ ಮತ್ತೊಂದು ಅವಧಿಗೆ ತಂಡದ ತರಬೇತುದಾರರಾಗಿ ಪುನರಾಯ್ಕೆಗೊಂಡಿದ್ದಾರೆ. ಶಾಸ್ತ್ರಿ ಅವರ ಮುಂದಿನ ಅವಧಿ 2021ರ ಟಿ-20 ವಿಶ್ವಕಪ್ವರೆಗೂ ಮುಂದುವರಿಯಲಿದೆ.