ದುಬೈ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮ್ಯಾಚ್ 87 ರನ್ ಸಿಡಿಸಿ ಅದ್ಭುತ ಪ್ರದರ್ಶನ ತೋರಿದ ಸನ್‌ರೈಸರ್ಸ್ ಹೈದರಾಬಾದ್ ತಂಡದ ವೃದ್ದಿಮಾನ್ ಸಹಾ ಅವರನ್ನು ಭಾರತ ತಂಡದ ಮುಖ್ಯ ಕೋಚ್ ರವಿಶಾಸ್ತ್ರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಟೂರ್ನಿಯಲ್ಲಿ ಎರಡನೇ ಬಾರಿ ಆಡುವ ಅವಕಾಶ ಪಡೆದಿದ್ದ ವೃದ್ಧಿಮಾನ್ ಸಹಾ,45 ಎಸೆತಗಳಲ್ಲಿ 12 ಬೌಂಡರಿ ಹಾಗೂ 2 ಸಿಕ್ಸ್ರ್ಸಹಿತ 87 ರನ್ ಸಿಡಿಸಿ ನಿರ್ಣಾಯಕ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಅವರ ಇನ್ನಿಂಗ್ಸ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ರವಿಶಾಸ್ತ್ರಿ ಇದೊಂದು ಅತ್ಯುತ್ತಮ ಇನ್ನಿಂಗ್ಸ್ ಎಂದು ಕೊಂಡಾಡಿದ್ದಾರೆ.
ಪಂದ್ಯದ ಬಳಿಕ ರವಿಶಾಸ್ತ್ರಿ, "ವಿಶ್ವದ ಅತ್ಯುತ್ತಮ ವಿಕೆಟ್ ಕೀಪರ್ ಇಂದು ರಾತ್ರಿ ಅಸಾಧಾರಣ ಪ್ರದರ್ಶನ ತೋರಿದ್ದಾರೆ," ಎಂದು ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪಂಜಾಬ್ ವಿರುದ್ಧ ದಯನೀಯ ಸೋಲು ಕಂಡಿದ್ದ ಸನ್ರೈಸರ್ಸ ಮಧ್ಯಮ ಕ್ರಮಾಂಕವನ್ನು ಬಲಿಷ್ಠಗೊಳಿಸಲು ಡೆಲ್ಲಿ ವಿರುದ್ಧ ಸ್ಫೋಟಕ ಬ್ಯಾಟ್ಸ್ಮನ್ ಜಾನಿ ಬೈರ್ಸ್ಟೋವ್ ಬದಲು ವಿಲಿಯಮ್ಸನ್ರಿಗೆ ಅವಕಾಶ ನೀಡಿ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಸಹಾಗೆ ನೀಡಿದ್ದಲ್ಲದೆ ಆರಂಭಿಕನಾಗಿ ಕಣಕ್ಕಿಳಿಯುವ ಅವಕಾಶ ನೀಡಿತ್ತು.
ಅದನ್ನು ಸಹಾ ಅದ್ಭುತವಾಗಿ ಉಪಯೋಗಿಸಿಕೊಂಡರಲ್ಲದೆ ಉತ್ತಮ ಇನ್ನಿಂಗ್ಸ್ ಕಟ್ಟಲು ಯಶಸ್ವಿಯಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಇನ್ನು ಸಹಾ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗಿರುವ ತಂಡದಲ್ಲಿ ಪ್ರಮುಖ ವಿಕೆಟ್ ಕೀಪರ್ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ.