ನವದೆಹಲಿ :ಐಪಿಎಲ್ನಲ್ಲಿ ರಾತ್ರೋರಾತ್ರಿ ಹೀರೋ ಆಗಿದ್ದ ಹರಿಯಾಣದ ರಾಹುಲ್ ತೆವಾಟಿಯಾ, ಟೀಂ ಇಂಡಿಯಾಗೆ ಆಯ್ಕೆಯಾದ ಸಂಭ್ರಮದಲ್ಲಿ ಇಂದು ನಡೆದ ಚಂಡೀಗಢ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಅರ್ಧಶತಕ ಸಿಡಿಸಿ ಅಬ್ಬರಿಸಿದ್ದಾರೆ.
ಶನಿವಾರ ಬಿಸಿಸಿಐ ಇಂಗ್ಲೆಂಡ್ ವಿರುದ್ಧ ಟಿ20 ಸರಣಿಗೆ ಘೋಷಿಸಿದ 19 ಸದಸ್ಯರ ತಂಡದಲ್ಲಿ ರಾಹುಲ್ ತೆವಾಟಿಯಾ ಆಲ್ರೌಂಡರ್ ವಿಭಾಗದಲ್ಲಿ ಅವಕಾಶ ಪಡೆದಿದ್ದರು. ಚೊಚ್ಚಲ ಬಾರಿಗೆ ದೇಶ ಪ್ರತಿನಿಧಿಸುವ ಅವಕಾಶ ಗಿಟ್ಟಿಸಿಕೊಂಡಿದ್ದ ಅವರು, ಅದೇ ಖುಷಿಯಲ್ಲಿ ವಿಜಯ ಹಜಾರೆ ಟ್ರೋಫಿಯಲ್ಲಿ ಚಂಡೀಗಢ ವಿರುದ್ಧ ಕೇವಲ 39 ಎಸೆತಗಳಲ್ಲಿ 73 ರನ್ ಬಾರಿಸಿದ್ದಾರೆ. ಇವರ ಇನ್ನಿಂಗ್ಸ್ನಲ್ಲಿ 6 ಭರ್ಜರಿ ಸಿಕ್ಸರ್ ಮತ್ತು 4 ಬೌಂಡರಿ ಒಳಗೊಂಡಿದ್ದವು.
ಕೋಲ್ಕತಾದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಹರಿಯಾಣ ತಂಡ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 299 ರನ್ ಬಾರಿಸಿತ್ತು. ಆರಂಭಿಕ ಬ್ಯಾಟ್ಸ್ಮನ್ ಹಿಮಾಂಶು ರಾಣಾ 102 ರನ್ ಗಳಿಸಿದರೆ, ಅರುಣ್ ಚಪ್ರಾನ 50 ಮತ್ತು ತೆವಾಟಿಯಾ 73 ರನ್ಗಳಿಸಿದ್ದರು.
ಇದಕ್ಕುತ್ತರವಾಗಿ ಚಂಡೀಗಢ ತಂಡ 49.3 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ನಾಯಕ ಮನನ್ ವೊಹ್ರಾ 117, ಅಂಕಿತ್ ಕೌಶಿಕ್ ಕೇವಲ 66 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್ ಸಹಿತ ಅಜೇಯ 78 ರನ್ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಇದನ್ನು ಓದಿ:ಕೊಹ್ಲಿ ಎದುರು ಆಡಿದ್ದೆ, ಇದೀಗ ಅವರ ಜೊತೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳುವ ಅದೃಷ್ಟ ಸಿಕ್ಕಿದೆ: ತೆವಾಟಿಯಾ