ನವದೆಹಲಿ: 16 ಕಾಮನ್ವೆಲ್ತ್ ರಾಷ್ಟ್ರಗಳ ಬಾಲಕ ಮತ್ತು ಬಾಲಕಿಯರಿಗೆ ರಾಹುಲ್ ದ್ರಾವಿಡ್ ನೇತೃತ್ವದಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ನೀಡಲಾಗುತ್ತದೆ.
ವಿದೇಶಾಂಗ ಮತ್ತು ಕ್ರೀಡಾ ಸಚಿವಾಲಯದ ಸಹಯೋಗದೊಂದಿಗೆ ಬಿಸಿಸಿಐ ಇಂತಹದೊಂದು ತರಬೇತಿ ಕಾರ್ಯಕ್ರಮವನ್ನ ಆಯೋಜಿಸಿದೆ. ಏಪ್ರಿಲ್ 19, 2018 ರಂದು ಲಂಡನ್‌ನಲ್ಲಿ ನಡೆದ ಕಾಮನ್ವೆಲ್ತ್ ಮುಖ್ಯಸ್ಥರ ಸಭೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ 16 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರಿಗಾಗಿ ಭಾರತದ ಕೆಲವು ಅತ್ಯುತ್ತಮ ಕ್ರಿಕೆಟಿಗರಿಂದ ತರಬೇತಿ ನೀಡಲಾಗುವುದು ಎಂದು ಘೋಷಿಸಿದ್ದರು. ಹೀಗಾಗಿ ಇಂತಹ ತರಬೇತಿ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿದೆ.
ಬೋಟ್ಸ್ವಾನ, ಕ್ಯಾಮರೂನ್, ಕೀನ್ಯಾ, ಮೊಜಾಂಬಿಕ್, ಮಾರಿಷಸ್, ನಮೀಬಿಯಾ, ನೈಜೀರಿಯಾ, ರುವಾಂಡಾ, ಉಗಾಂಡಾ, ಜಾಂಬಿಯಾ, ಮಲೇಶಿಯಾ, ಸಿಂಗಾಪುರ್, ಜಮೈಕಾ, ಟ್ರಿನಿಡಾಡ್ ಮತ್ತು ಟೊಬಾಗೊ, ಫಿಜಿ ಮತ್ತು ತಾಂಜಾನಿಯಾ ದೇಶದ 16 ವರ್ಷದೊಳಗಿನ 18 ಬಾಲಕರು ಮತ್ತು 17 ಬಾಲಕಿಯರಿಗೆ ತರಬೇತಿ ನೀಡಲಾಗುತ್ತದೆ.
ಸುದೀರ್ಘವಾಗಿ 1 ತಿಂಗಳ ಕಾಲ ನಡೆಯುವ ಈ ತರಬೇತಿ ಅಕ್ಟೋಬರ್ 1 ರಿಂದ 30 ರ ವರೆಗೆ ನಡೆಯಲಿದ್ದು, ಸದ್ಯ ಬೆಂಗಳೂರಿನಲ್ಲಿ ನಡೆಯುತ್ತಿರುವ ತರಬೇತಿ ಕಾರ್ಯಕ್ರಮದಲ್ಲಿ ದೇಶದ ಅತ್ಯುತ್ತಮ ಕೋಚ್ಗಳು ಕೂಡ ಭಾಗವಹಿಸಿದ್ದಾರೆ. ಇದೀಗ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ರಾಹುಲ್ ದ್ರಾವಿಡ್ ಈ ತರಬೇತಿ ಶಿಬಿರ ಕೂಡಿಕೊಳ್ಳಲಿದ್ದು, ಮಕ್ಕಳಿಗೆ ಕ್ರಿಕೆಟ್ ಪಾಠ ಹೇಳಿಕೊಡಲಿದ್ದಾರೆ.