ನವದೆಹಲಿ:ದಿ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ಇದೀಗ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರನ್ನ ಹಿಂದಿಕ್ಕಿ ಅತ್ಯುತ್ತಮ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು, ವಿಸ್ಡನ್ ಇಂಡಿಯಾ ನಡೆಸಿದ ಪೋಲ್ನಲ್ಲಿ ಮಾಸ್ಟರ್ ಬ್ಲಾಸ್ಟರ್, ಸುನೀಲ್ ಗವಾಸ್ಕರ್ ಹಾಗೂ ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿದ್ದಾರೆ.
ಸಚಿನ್ ತೆಂಡೂಲ್ಕರ್ ಹಿಂದಿಕ್ಕಿದ ದ್ರಾವಿಡ್ ಕಳೆದ ಕೆಲ ದಿನಗಳ ಹಿಂದೆ ವಿಸ್ಡನ್ ಇಂಡಿಯಾ ಭಾರತದ ಅತ್ಯುತ್ತಮ ಟೆಸ್ಟ್ ಬ್ಯಾಟ್ಸ್‌ಮನ್ ಯಾರು ಎಂದು ಫೇಸ್ಬುಕ್ ಮೂಲಕ ಪೋಲ್ ನಡೆಸಿತ್ತು. ಇದರಲ್ಲಿ ಒಟ್ಟು 11 ಆಟಗಾರರ ಹೆಸರು ನೀಡಲಾಗಿತ್ತು. ಇದೀಗ ಅದರ ಫಲಿತಾಂಶ ಹೊರ ಬಿದ್ದಿದೆ. ಪೋಲ್ನಲ್ಲಿ ಶೇ. 52ರಷ್ಟು ಮಂದಿ ದ್ರಾವಿಡ್ಗೆ ವೋಟ್ ಮಾಡಿದ್ದಾರೆ.
ಎರಡನೇ ಸ್ಥಾನ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ಗೆ ನೀಡಲಾಗಿದ್ದು, ಶೇ. 42ರಷ್ಟು ಮತ ಪಡೆದುಕೊಂಡಿದ್ದಾರೆ. ಮೂರನೇ ಸ್ಥಾನವನ್ನ ರನ್ ಮಷಿನ್ ವಿರಾಟ್ ಕೊಹ್ಲಿ ಹಾಗೂ ನಂತರದ ಸ್ಥಾನ ಸುನಿಲ್ ಗವಾಸ್ಕರ್ಗೆ ನೀಡಲಾಗಿದೆ.
ಟೀಂ ಇಂಡಿಯಾ ಪರ ರಾಹುಲ್ ದ್ರಾವಿಡ್ 164 ಟೆಸ್ಟ್ ಪಂದ್ಯಗಳನ್ನಾಡಿದ್ದು, 52.31ರ ಸರಾಸರಿಯಲ್ಲಿ 13,288 ರನ್ ಗಳಿಸಿದ್ದಾರೆ. 200 ಟೆಸ್ಟ್ ಪಂದ್ಯಗಳನ್ನಾಡಿರುವ ಸಚಿನ್ 53.78ರ ಸರಾಸರಿಯಲ್ಲಿ 15,921 ರನ್ ಗಳಿಸಿದ್ದಾರೆ. 125 ಪಂದ್ಯಗಳನ್ನಾಡಿರುವ ಗವಾಸ್ಕರ್ 10,122 ರನ್ ಗಳಿಸಿದ್ದು, ಟೀಂ ಇಂಡಿಯಾ ಕ್ಯಾಪ್ಟನ್ ಕೊಹ್ಲಿ 86 ಪಂದ್ಯಗಳಿಂದ 7,240 ರನ್ ಗಳಿಸಿದ್ದಾರೆ.