ಇಂಗ್ಲೆಂಡ್:ಡೆಡ್ಲಿ ವೈರಸ್ನಿಂದಾಗಿ ಕಳೆದ ಮಾರ್ಚ್ ತಿಂಗಳಿಂದಲೂ ಕ್ರಿಕೆಟ್ ಟೂರ್ನಿ ಅಮಾನತುಗೊಂಡಿದ್ದು, ಮುಂದಿನ ಎರಡು ತಿಂಗಳಲ್ಲಿ ಪುನಾರಂಭಗೊಳ್ಳುವ ಎಲ್ಲ ಲಕ್ಷಣ ಗೋಚರವಾಗುತ್ತಿವೆ. ಇದೀಗ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಇಂಗ್ಲೆಂಡ್ ಕ್ರಿಕೆಟರ್ ಜೋಶ್ ಬಟ್ಲರ್ ಮಾಹಿತಿ ನೀಡಿದ್ದಾರೆ.
ಮುಂದಿನ ಒಂದು ಅಥವಾ ಎರಡು ವಾರದಲ್ಲಿ ಕ್ರಿಕೆಟರ್ಗಳಿಗೆ ತರಬೇತಿ ಆರಂಭಗೊಳ್ಳುವ ಸಾಧ್ಯತೆ ಇದ್ದು, ಈ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತಿ ಅವಶ್ಯವಾಗಿದೆ ಎಂದು ತಿಳಿಸಿದ್ದಾರೆ. ಮುಂದಿನ ವಾರದಲ್ಲಿ ಕ್ರಿಕೆಟ್ ಪ್ಲೇಯರ್ಗಳಿಗೆ ಚಿಕ್ಕದಾಗಿ ತರಬೇತಿ ಆರಂಭಿಸಬಹುದು. ಈ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆ ಇದೆ. ಜತೆಗೆ ಕೋಚ್ ಜತೆ ಮಾತ್ರ ಹೆಚ್ಚು ಸಮಯ ಕಳೆಯಲು ಅವಕಾಶ ನೀಡಲುಬಹುದಾಗಿದೆ ಎಂದಿದ್ದಾರೆ. ಆರಂಭದಲ್ಲಿ ನೆಟ್ ಪ್ರ್ಯಾಕ್ಟೀಸ್ ಮಾಡಲು ಅನುಮತಿ ನೀಡಬಹುದು ಎಂದಿದ್ದಾರೆ.
ಖಾಸಗಿ ಸುದ್ದಿವಾಹಿನಿವೊಂದಕ್ಕೆ ಸಂದರ್ಶನ ನೀಡಿರುವ ಸಂದರ್ಭದಲ್ಲಿ ಈ ಮಾಹಿತಿ ಹಂಚಿಕೊಂಡಿರುವ ಅವರು, ನನಗೆ ಬಂದಿರುವ ಮಾಹಿತಿ ಪ್ರಕಾರ ಆದಷ್ಟು ಬೇಗ ಕ್ರಿಕೆಟ್ ಆರಂಭಗೊಳ್ಳುವ ಸಾಧ್ಯತೆ ಇದೆ. ಈ ವೇಳೆ ಆಟಗಾರರು ಮತ್ತು ಕೋಚ್ ಮಾತ್ರ ತರಬೇತಿಯಲ್ಲಿ ಭಾಗಿಯಾಗಲು ಅವಕಾಶ ನೀಡಬಹುದಾಗಿದೆ. ಕಳೆದ ತಿಂಗಳ ಆರಂಭಗೊಳ್ಳಬೇಕಾಗಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ಕೂಡ ಕೊರೊನಾ ವೈರಸ್ ಕಾರಣದಿಂದಾಗಿ ಮುಂದೂಡಿಕೆಯಾಗಿದೆ.
ಉಳಿದಂತೆ ಬೇರೆ ಬೇರೆ ದೇಶಗಳ ಮಧ್ಯೆ ನಡೆಯಬೇಕಾಗಿದ್ದ ಕ್ರಿಕೆಟ್ ಟೂರ್ನಿ ಕೂಡ ಮುಂದೂಡಿಕೆಯಾಗಿದ್ದು, ಮುಂದಿನ ಎರಡು ತಿಂಗಳಲ್ಲಿ ಎಲ್ಲವೂ ಮೊದಲಿನಂತೆ ಆದರೆ ಪ್ರಾರಂಭಗೊಳ್ಳುವ ಸಾಧ್ಯತೆ ಇದೆ.
2019ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿಕೆಟ್ ಕೀಪರ್ ಜೋಶ್ ಬಟ್ಲರ್ ಧರಿಸಿದ್ದ ಜರ್ಸಿಯನ್ನ ಕೋವಿಡ್-19 ವಿರುದ್ಧದ ಹೋರಾಟಕ್ಕಾಗಿ ಹರಾಜಿಗಿಟ್ಟಿದ್ದರು. ಅದರಿಂದ ಬಂದ ಬರೋಬ್ಬರಿ 80 ಸಾವಿರ ಡಾಲರ್ಅನ್ನು (60.7 ಲಕ್ಷ ರೂ) ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ನೀಡಿದ್ದಾರೆ.