ಲಾಹೋರ್: ಶಂಕಿತ ಬುಕ್ಕಿಯೊಬ್ಬ ರಾವಲ್ಪಿಂಡಿಯಲ್ಲಿ ನಡೆಯುತ್ತಿರುವ ಪಾಕಿಸ್ತಾನದ ನ್ಯಾಷನಲ್ ಟಿ20 ಕಪ್ ವೇಳೆ ಆಟಗಾರನೊಬ್ಬನನ್ನು ಸಂಪರ್ಕಿಸಿ ಫಿಕ್ಸಿಂಗ್ಗೆ ಯತ್ನಿಸಿರುವುದು ಬೆಳಕಿಗೆ ಬಂದಿದೆ.
ರಾವಲ್ಪಿಂಡಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಟಿ20 ಕಪ್ ವೇಳೆ ಅನುಮಾನಾಸ್ಪದವಾಗಿ ಬುಕ್ಕಿಯೊಬ್ಬ ತನ್ನನ್ನು ಸಂಪರ್ಕಿಸಿರುವ ವಿಷಯವನ್ನು ಆಟಗಾರನೊಬ್ಬ ಬೋರ್ಡ್‌ಗೆ ತಿಳಿಸಿದ್ದಾಗಿ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಖಚಿತಪಡಿಸಿದೆ.
"ಆಟಗಾರ ಈ ವಿಷಯನ್ನು ವರದಿ ಮಾಡಿದ ನಂತರ ಪಿಸಿಬಿ ಭ್ರಷ್ಟಾಚಾರ ವಿರೋಧಿ ಘಟಕ ತನ್ನದೇ ಆದ ಸೂಕ್ಷ್ಮ ಮಾಹಿತಿಯನ್ನು ಪತ್ತೆಹಚ್ಚಿ ಅದನ್ನು ಎಫ್ಐಎಗೆ (ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ) ರವಾನಿಸಿದೆ. ಎಫ್ಐಎ ಇಂತಹ ವಿಷಯಗಳ ಬಗ್ಗೆ ತನಿಖೆ ನಡೆಸಲು ಅಗತ್ಯವಾದ ಪರಿಣತಿ, ಸಂಪನ್ಮೂಲಗಳು ಹಾಗೂ ಸಾಮರ್ಥ್ಯವುಳ್ಳ ಅಧಿಕಾರಿಗಳನ್ನು ಹೊಂದಿದೆ" ಎಂದು ಪಿಸಿಬಿ ತನ್ನ ಹೇಳಿಕೆ ನೀಡಿದೆ.
"ಬುಕ್ಕಿ ಸಂಪರ್ಕಿಸಿದ ವಿಚಾರವನ್ನು ಆಟಗಾರ ಪಿಸಿಬಿಯ ಭ್ರಷ್ಟಾಚಾರ ವಿರೋಧಿ ಮಂಡಳಿಯ ನಿರ್ದೇಶಕ ಆಸಿಫ್ ಮಹಮೂದ್ ಅವರಿಗೆ ವರದಿ ಮಾಡಿದ್ದಾರೆ. ಆದರೆ ತನಿಖೆ ಪ್ರಗತಿಯಲ್ಲಿರುವ ಕಾರಣ ಆಟಗಾರನ ಮಾಹಿತಿಯನ್ನು ಬಹಿರಂಗ ಪಡಿಸುವುದು ಸೂಕ್ತವಲ್ಲ"ಎಂದು ತಿಳಿಸಿದೆ.