ಲಾಹೋರ್: ವಿಶ್ವಕಪ್ನಲ್ಲಿ ಕಳಪೆ ಪ್ರದರ್ಶನ ನೀಡಿದ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಂಡದ ಎಲ್ಲಾ ಕೋಚ್ಗಳನ್ನು ಬದಲಿಸಲು ನಿರ್ಧರಿಸಿದೆ.
ಪಾಕಿಸ್ತಾನ ತಂಡ ಇಂಗ್ಲೆಂಡ್ನಲ್ಲಿ ನಡೆದ ವಿಶ್ವಕಪ್ನಲ್ಲಿ ಕಳಪೆ ಪ್ರದರ್ಶನ ನೀಡಿತ್ತು. ಭಾರತದ ವಿರುದ್ಧ ಸೋಲುನುಭವಿಸಿದ ನಂತರ ತಂಡದ ನಾಯಕ ಹಾಗೂ ಕೋಚ್ ಸ್ಥಾನ ತೂಗುಯ್ಯಾಲೆ ಮೇಲೆ ನಿಂತಿತ್ತು. ಇದೀಗ ಪಿಸಿಬಿ ಎಲ್ಲಾ ಕೋಚ್ಗಳ ಅವಧಿಯನ್ನು ಮುಂದುವರಿಸುವುದಿಲ್ಲ, ಹೊಸ ಕೋಚ್ಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ತಿಳಿಸಿದೆ.
ಆಗಸ್ಟ್ 2 ರಂದು ನಡೆದಿದ್ದ ವಿಶ್ವಕಪ್ ಪರಾಮರ್ಶೆ ಸಭೆಯಲ್ಲಿ ಪಾಕಿಸ್ತಾನ ಮುಖ್ಯ ಕೋಚ್ ಆಗಿದ್ದ ಮಿಕಿ ಅರ್ಥರ್ ನಾಯಕ ಸರ್ಫರಾಜ್ರನ್ನು ನಾಯಕತ್ವದಿಂದ ಕೆಳಗಿಳಿಸಿ ಬಾಬರ್ ಅಜಮ್ರನ್ನು ಟೆಸ್ಟ್ ತಂಡಕ್ಕೆ, ಶಬಾದ್ ಖಾನ್ರನ್ನು ಸೀಮಿತ ಓವರ್ಗಳ ಪಂದ್ಯಕ್ಕೂ ನಾಯಕರನ್ನಾಗಿ ನೇಮಿಸಿ ಎಂದು ಶಿಫಾರಸು ಮಾಡಿದ್ದರು.
ಕೋಚ್ ಶಿಫಾರಸನ್ನು ಸ್ವೀಕರಿಸಿದ್ದ ಪಿಸಿಬಿ ನಾಯಕತ್ವದ ಜೊತೆಗೆ ಕೋಚ್ಗಳನ್ನು ಹೊಸದಾಗಿ ಆಯ್ಕೆ ಮಾಡಲು ನಿರ್ಧರಿಸಿದೆ. ಈಗಾಗಲೇ ಮುಖ್ಯ ಕೋಚ್ ಮಿಕಿ ಆರ್ಥರ್, ಬೌಲಿಂಗ್ ಕೋಚ್ ಅಜರ್ ಮೊಹಮ್ಮದ್, ಗ್ರ್ಯಾಂಟ್ ಫ್ಲವರ್, ಗ್ರ್ಯಾಂಟ್ ಲಡನ್ ಕಳೆದ ಮೂರು ವರ್ಷಗಳಿಂದ ಉತ್ತಮ ಸೇವೆ ಸಲ್ಲಿಸಿದ್ದಾರೆ. ಅವರಿಂದ ತಂಡದ ಆಟಗಾರರು ತುಂಬಾ ಕಲಿತಿದ್ದಾರೆ. ಅವರ ಮುಂದಿನ ಕ್ರಿಕೆಟ್ ಜೀವನ ಉತ್ತಮವಾಗಿರಲಿ ಎಂದು ಪಿಸಿಬಿ ಅಧ್ಯಕ್ಷ ಇಶಾನ್ ಮಣಿ ತಿಳಿಸಿದ್ದಾರೆ.
ಹೊಸ ಕೋಚ್ಗಳ ಆಯ್ಕೆ ಕಾರ್ಯ ಪ್ರಗತಿಯಲ್ಲಿದೆ. ಖಾಲಿಯಿರುವ ಎಲ್ಲಾ ನಾಲ್ಕು ವಿಭಾಗಗಳಿಗೆ ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಮಣಿ ತಿಳಿಸಿದ್ದಾರೆ.