ಮೆಲ್ಬೋರ್ನ್:ಎರಡನೇ ಟೆಸ್ಟ್‌ನಲ್ಲಿ ಹೀನಾಯ ಸೋಲು ಕಂಡಿರುವ ಆಸ್ಟ್ರೇಲಿಯಾ ತಂಡ, ಮೂರನೇ ಪಂದ್ಯದಲ್ಲಿ ಗಾಯದಿಂದ ಚೇತರಿಸಿಕೊಂಡಿರುವ ಡೇವಿಡ್ ವಾರ್ನರ್ ಅಥವಾ ವಿಲ್ ಪುಕೋವ್ಸ್ಕಿ ಕಣಕ್ಕಿಳಿಯುವ ವಿಶ್ವಾಸದಲ್ಲಿದೆ.
ತೊಡೆಸಂದು ನೋವಿನಿಂದ ಚೇತರಿಸಿಕೊಂಡಿರುವ ವಾರ್ನರ್, ಜನವರಿ 7ರಿಂದ ನಡೆಯಲಿರುವ 3ನೇ ಟೆಸ್ಟ್ ಪಂದ್ಯಕ್ಕೆ ಮರಳುವ ಸಾಧ್ಯತೆ ಹೆಚ್ಚಿದೆ ಎಂದು ಆಸ್ಟ್ರೇಲಿಯಾ ತಂಡದ ನಾಯಕ ಟಿಮ್ ಪೇನ್ ತಿಳಿಸಿದ್ದಾರೆ.
"ಡೇವಿಡ್ ತುಂಬಾ ಫಿಟ್ ಆಗಿ ಕಾಣುತ್ತಿದ್ದಾರೆ. ಅವರು ವಿಕೆಟ್ಗಳ ಮಧ್ಯೆ ಓಡಲು ಶುರು ಮಾಡಿದ್ದಾರೆ. ಹಾಗಾಗಿ ಅವರು ಮೂರನೇ ಟೆಸ್ಟ್ಗೆ ಮರಳುವ ಸಾಧ್ಯತೆ ಇದೆ" ಎಂದು ಎರಡನೇ ಟೆಸ್ಟ್ ಪಂದ್ಯದ ನಂತರ ನಡೆದ ಮಾಧ್ಯಮಗೋಷ್ಟಿಯಲ್ಲಿ ತಿಳಿಸಿದರು.
ಓದಿ: ಇಂಡೋ v/s ಆಸೀಸ್ 2ನೇ ಟೆಸ್ಟ್ : ಟೀಂ ಇಂಡಿಯಾಗೆ 8 ವಿಕೆಟ್ಗಳ ಭರ್ಜರಿ ಜಯ, 1-1ರಿಂದ ಸರಣಿ ಸಮಬಲ
ವಾರ್ನರ್ ಜೊತೆಗೆ ಯುವ ಆರಂಭಿಕ ಬ್ಯಾಟ್ಸ್ಮನ್ ವಿಲ್ ಪುಕೋವ್ಸ್ಕಿ ಕೂಡ ತಂಡಕ್ಕೆ ಮರಳುವ ಹಾದಿಯಲ್ಲಿ ತುಂಬಾ ದೂರ ಉಳಿದಿಲ್ಲ ಎಂಬ ಮಾಹಿತಿಯನ್ನು ಪೇನ್ ನೀಡಿದ್ದಾರೆ.
ವಾರ್ನರ್ ಕೊನೆಯ ಏಕದಿನ ಪಂದ್ಯ, 3 ಟಿ20 ಮತ್ತು 2 ಟೆಸ್ಟ್ ಪಂದ್ಯಗಳನ್ನು ಈಗಾಗಲೇ ತಪ್ಪಿಸಿಕೊಂಡಿದ್ದಾರೆ. ಪರಿಣಾಮ ತಂಡ ಟಿ20 ಸರಣಿ ಸೋತರೆ, ಟೆಸ್ಟ್ ಸರಣಿಯಲ್ಲಿ ಎರಡನೇ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದೆ.
ಆರಂಭಿಕ ಬ್ಯಾಟ್ಸ್ಮನ್ ಜೋ ಬರ್ನ್ಸ್ ಸ್ಥಿರತೆ ಕಾಯ್ದುಕೊಳ್ಳಲು ವಿಫಲರಾಗುತ್ತಿದ್ದಾರೆ. ವೇಡ್ ತಾತ್ಕಾಲಿಕವಾಗಿ ಆರಂಭಿಕನಾಗಿ ಕಣಕ್ಕಿಳಿದು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ ವಾರ್ನರ್ ತಂಡ ಸೇರಿಕೊಂಡರೆ ಬರ್ನ್ಸ್ ಬದಲು ಕಣಕ್ಕಿಳಿಯಬಹುದಾಗಿದೆ.
ಅಡಿಲೇಡ್ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ತಂಡ 8 ವಿಕೆಟ್ಗಳಿಂದ ಗೆದ್ದರೆ, 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ 8 ವಿಕೆಟ್ಗಳಿಂದ ಗೆದ್ದು ಸೇಡು ತೀರಿಸಿಕೊಂಡಿದೆ.