ನವದೆಹಲಿ: ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಸೋಲು ಕಾಣುತ್ತಿದ್ದಂತೆ ಇದೀಗ ವೆಸ್ಟ್ ಇಂಡೀಸ್ ಪ್ರವಾಸಕ್ಕಾಗಿ ತಂಡ ಪ್ರಕಟಗೊಂಡಿದೆ. ಎಲ್ಲರೂ ಊಹೆ ಪ್ರಕಾರ ತಂಡದಲ್ಲಿ ಕೆಲವೊಂದು ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದ್ದು, ಅದೇ ರೀತಿ ವೇಗದ ಬೌಲರ್ ನವದೀಪ್ ಸೈನಿ ಚಾನ್ಸ್ ಪಡೆದುಕೊಂಡಿದ್ದಾರೆ.
26 ವರ್ಷದ ನವದೀಪ್ ಸೈನಿ ಹರಿಯಾಣದ ಬೌಲರ್ ಆಗಿದ್ದು, ಆರಂಭದಲ್ಲಿ ಟೆನ್ನಿಸ್ ಬಾಲ್ನಲ್ಲಿ ಬೌಲ್ ಮಾಡುತ್ತಿದ್ದ ಈ ಪ್ಲೇಯರ್ ಪ್ರತಿ ಪಂದ್ಯದಿಂದ 200ರೂ ಪಡೆದುಕೊಳ್ಳುತ್ತಿದ್ದರು. ಕಳೆದ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆರ್ಸಿಬಿ ತಂಡಕ್ಕೆ 20 ಲಕ್ಷ ರೂಗೆ ಈ ಪ್ಲೇಯರ್ ಹರಾಜುಗೊಂಡಿದ್ದರು.
ಸುಮಾರು 150 ಕಿಮಿ ಸ್ಪೀಡ್ನಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿರುವ ಈ ಪ್ಲೇಯರ್ ಕಳೆದ ಐಪಿಎಲ್ನಲ್ಲಿ 152.85 ಕಿಮಿ ವೇಗದಲ್ಲಿ ಬೌಲ್ ಮಾಡಿ ಆಶ್ಚರ್ಯ ಮೂಡಿಸಿದ್ದರು. ಜತೆಗೆ 13 ಪಂದ್ಯಗಳಿಂದ 11ವಿಕೆಟ್ ಪಡೆದುಕೊಂಡಿದ್ದ ಈ ಪ್ಲೇಯರ್ 141 ಡಾಟ್ ಬಾಲ್ ಎಸೆದಿದ್ದರು. ಸದ್ಯ ವೆಸ್ಟ್ ಇಂಡಿಸ್ ಎ ವಿರುದ್ಧ ಭಾರತ ಎ ತಂಡ ಆಡಿರುವ ಐದು ಏಕದಿನ ಅನೌಪಚಾರಿಕ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಖ್ಯಾತಿ ಇವರಿಗಿದೆ.
ವಿಶ್ವಕಪ್ನಲ್ಲೂ ಟೀಂ ಇಂಡಿಯಾಗೆ ನೆಟ್ ಬೌಲರ್ ಆಗಿ ಈ ಪ್ಲೇಯರ್ ಆಯ್ಕೆಯಾಗಿ, ಆಯ್ಕೆ ಸಮಿತಿ ಗಮನ ಸೆಳೆದಿದ್ದರು. ಇದೀಗ ವೆಸ್ಟ್ ಇಂಡೀಸ್ ವಿರುದ್ಧದ ಟಿ - 20 ಹಾಗೂ ಏಕದಿನ ಸರಣಿಗೆ ಆಯ್ಕೆಗೊಂಡಿದ್ದಾರೆ.
2013ರ ವರೆಗೂ ಕೇವಲ ಟೆನ್ನಿಸ್ ಬಾಲ್ನಲ್ಲಿ ಅಪರೂಪಕ್ಕೊಮ್ಮೆ ಕ್ರಿಕೆಟ್ ಆಡುತ್ತಿದ್ದ ನವದೀಪ್ ಸೈನಿ, ತದನಂತರ ಟೀಂ ಇಂಡಿಯಾ ಕ್ರಿಕೆಟರ್ ಗೌತಮ್ ಗಂಭೀರ್ಗೆ ನೆಟ್ನಲ್ಲಿ 15 ನಿಮಿಷಗಳ ಕಾಲ ಬೌಲ್ ಮಾಡಿದ್ದರು. ಅವರ ಪ್ರತಿಭೆ ಕಂಡು ಹಿಡಿದ ಗಂಭೀರ್ ದೆಹಲಿ ತಂಡದಲ್ಲಿ ಆಡುವಂತೆ ಕೇಳಿಕೊಂಡಿದ್ದರು. ಬಳಿಕ ದೆಹಲಿ ರಣಜಿ ತಂಡದಲ್ಲಿ ಆಡುವ ಅವಕಾಶ ಸಹ ಪಡೆದುಕೊಂಡಿದ್ದರು.ಇವರ ಪ್ರದರ್ಶನ ನೋಡಿರುವ ಆಯ್ಕೆ ಸಮಿತಿ ಇದೀಗ ತಂಡಕ್ಕೆ ಕರೆಯಿಸಿಕೊಂಡಿದೆ.