ಶಾರ್ಜಾ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೇವಲ 32 ಎಸೆತಗಳಲ್ಲಿ 74 ರನ್ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದ ಸಂಜು ಸ್ಯಾಮ್ಸನ್, ಆ ಪಂದ್ಯದಲ್ಲಿ ಈ ಪ್ರಶಸ್ತಿಗೆ ರಾಹುಲ್ ತೆವಾಟಿಯಾ ಅರ್ಹರು ಎಂದು ಅಭಿಪ್ರಾಯಪಟ್ಟಿದ್ದಾರೆ.
ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ 16 ರನ್ಗಳ ವಿಜಯ ಸಾಧಿಸಿದ ನಂತರ ಪ್ರಶಸ್ತಿ ಸ್ವೀಕರಿಸುವ ವೇಳೆ ಸ್ಯಾಮ್ಸನ್ ಈ ಮಾತನ್ನು ಈ ಹೇಳಿದ್ದಾರೆ.
ಮಂಗಳವಾರ ನಡೆದ ಪಂದ್ಯದಲ್ಲಿ ಸ್ಯಾಮ್ಸನ್ 74, ಸ್ಟಿವ್ ಸ್ಮಿತ್ 69 ಹಾಗೂ ಜೋಫ್ರಾ ಆರ್ಚರ್ 27 ರನ್ಗಳ ನೆರವಿನಿಂದ ರಾಜಸ್ಥಾನ್ ರಾಯಲ್ಸ್ 216 ರನ್ಗಳಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಸಿಎಸ್ಕೆ 6 ವಿಕೆಟ್ ನಷ್ಟಕ್ಕೆ 200 ರನ್ಗಳಿಸಲಷ್ಟೆ ಶಕ್ತವಾಗಿ 16 ರನ್ಗಳ ಸೋಲು ಕಂಡಿತು. ತೆವಾಟಿಯಾ ಮೂರು ವಿಕೆಟ್ ಪಡೆದು ಮಿಂಚಿದ್ದರು.
"ನನ್ನ ಪ್ರಕಾರ ಪಂದ್ಯ ಶ್ರೇಷ್ಠ ಪ್ರಶಸ್ತಿ ರಾಹುಲ್ ತೆವಾಟಿಯಾಗೆ ಸಲ್ಲಬೇಕು. ಅವರು ಎದುರಾಳಿ ತಂಡದ ಪ್ರಮುಖ ಮೂರು ವಿಕೆಟ್ ಪಡೆದು ಪಂದ್ಯದ ಗತಿಯನ್ನೇ ಬದಲಿಸಿದರು. ನಿಜಕ್ಕೂ ಅವರೇ ಗೇಮ್ ಚೇಂಜರ್, ಅದರಲ್ಲೂ ತೇವಾಂಶ ಹೆಚ್ಚಿರುವ ಸಂದರ್ಭದಲ್ಲಿ ಬೌಲರ್ಗಳಿಗೆ ತುಂಬಾ ಕಷ್ಟ" ಎಂದು ತೆವಾಟಿಯಾ ಪ್ರದರ್ಶನವನ್ನು ಮೆಚ್ಚಿಕೊಂಡಿದ್ದಾರೆ.
ಶಾರ್ಜಾ ಮೈದಾನದಲ್ಲಿ ಇಬ್ಬನಿ ಹೆಚ್ಚಾಗುವುದರಿಂದ ನೀವು ಎಷ್ಟೇ ಸ್ಕೋರ್ ಗಳಿಸಿದರೂ ಚೇಸಿಂಗ್ ಸುಲಭವಾಗಿರುತ್ತದೆ. ಅದಕ್ಕಾಗಿ ನಾನು ಪ್ರತಿ ಎಸೆತದಲ್ಲೂ ದೊಡ್ಡ ಹೊಡೆತಕ್ಕೆ ಮುಂದಾದೆ. ಅದರಲ್ಲೂ ಸ್ಮಿತ್ ಜೊತೆ ಬ್ಯಾಟಿಂಗ್ ಮಾಡುವಾಗ ನನಗೆ ನನ್ನಿಷ್ಟದಂತೆ ಬ್ಯಾಟಿಂಗ್ ಮಾಡಲೂ ಲೈಸೆನ್ಸ್ ಇತ್ತು. ನಾವಿಬ್ಬರೂ ನಾಲ್ಕೈದು ವರ್ಷಗಳಿಂದ ಒಟ್ಟಿಗೆ ಬ್ಯಾಟಿಂಗ್ ಮಾಡುತ್ತಿರುವುದರಿಂದ, ಒಬ್ಬರೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇವೆ ಎಂದು ಅವರು ಹೇಳಿದ್ದಾರೆ.