ಕೋಲ್ಕತ್ತಾ:ಮುಂಬರುವ 2020ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನ ಕನ್ನಡಿಗ ಕೆ.ಎಲ್.ರಾಹುಲ್ ಮುನ್ನಡೆಸಲಿದ್ದಾರೆ.
ಕಳೆದ ಆವೃತ್ತಿಯಲ್ಲಿ ಕಿಂಗ್ಸ್ ಪಂಜಾಬ್ ತಂಡದ ಕ್ಯಾಪ್ಟನ್ ಆಗಿದ್ದ ರವಿಚಂದ್ರನ್ ಅಶ್ವಿನ್ ಈಗಾಗಲೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರಿಕೊಂಡಿದ್ದಾರೆ. ಪಂಜಾಬ್ ತಂಡದ ಮ್ಯಾನೇಜ್ಮೆಂಟ್ ಹೊಸ ನಾಯಕನ ಹುಡುಕಾಟದಲ್ಲಿತ್ತು. ಮೂಲಗಳ ಪ್ರಕಾರ ಕನ್ನಡಿಗ ಕೆ.ಎಲ್.ರಾಹುಲ್ಗೆ ತಂಡದ ಸಾರಥ್ಯ ವಹಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿತ್ತು.
ಆದ್ರೆ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ಬಳಿಕ ಈ ಬಗ್ಗೆ ಅಧಿಕೃತ ಮಾಹಿತಿ ನೀಡಲಾಗುತ್ತದೆ ಎಂದು ಹೇಳಲಾಗಿತ್ತು. ಅದರಂತೆ ಇಂದು ಹರಾಜು ಪ್ರಕ್ರಿಯೆ ಮುಕ್ತಾಯವಾದ ನಂತರ ಮಾಹಿತಿ ನೀಡಿರುವ ಪಂಜಾಬ್ ತಂಡದ ಕೋಚ್ ಅನಿಲ್ ಕುಂಬ್ಳೆ, ಕೆ.ಎಲ್.ರಾಹುಲ್ ನಾಯಕನಾಗಿ ತಂಡವನ್ನ ಮುನ್ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.
2018ರಲ್ಲಿ ಪಂಜಾಬ್ ತಂಡದ ಪರ 659 ರನ್ ಗಳಿಸಿದ್ದ ರಾಹುಲ್ ಈ ವರ್ಷ 593ರನ್ ಸಿಡಿಸಿದ್ದರು. ಕಿಂಗ್ಸ್ ಇಲೆವೆನ್ ಈಗಾಗಲೆ ಅನಿಲ್ ಕುಂಬ್ಳೆ ಅವರನ್ನ ಕೋಚ್ ಆಗಿ ಆಯ್ಕೆ ಮಾಡಿದ್ದು, ದಕ್ಷಿಣ ಆಫ್ರಿಕಾ ತಂಡದ ಮಾಜಿ ಆಟಗಾರ ಜಾಂಟಿ ರೋಡ್ಸ್ ಅವರನ್ನ ಫೀಲ್ಡಿಂಗ್ ಕೋಚ್ ಆಗಿ ಆಯ್ಕೆ ಮಾಡಿಕೊಂಡಿದೆ.