ನವದೆಹಲಿ: ಭಾರತ ತಂಡದ ಮಾಜಿ ಕ್ರಿಕೆಟರ್ ವಾಸೀಮ್ ಜಾಫರ್ ಉತ್ತರಾಖಾಂಡ್ನ ಮುಖ್ಯ ಕೋಚ್ ಹುದ್ದೆಗೆ ಮಂಗಳವಾರ ರಾಜೀನಾಮೆ ನೀಡಿದ್ದಾರೆ.
ಫೆಬ್ರವರಿ 20ರಂದು ನಡೆಯುವ ವಿಜಯ್ ಹಜಾರೆ ಕ್ರಿಕೆಟ್ ಟೂರ್ನಿಗಾಗಿ ತಂಡದ ಆಯ್ಕೆ ವಿಚಾರವಾಗಿ ಆಯ್ಕೆಗಾರರ ಜೊತೆ ಮನಸ್ತಾಪ ಎದುರಾಗಿದ್ದು, ತಮ್ಮ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದಾರೆ. ಕ್ರಿಕೆಟ್ ಅಸೋಸಿಯೇಷನ್ ಆಫ್ ಉತ್ತರಾಖಂಡ್ ಕೂಡ ಜಾಫರ್ ರಾಜೀನಾಮೆಯನ್ನು ಅಂಗೀಕರಿಸಿದೆ.
ತಂಡದಲ್ಲಿ ಕೆಲವು ಆಟಗಾರರಿಗೆ ಸಾಕಷ್ಟು ಸಾಮರ್ಥ್ಯವಿದೆ ಮತ್ತು ನನ್ನಿಂದ ತುಂಬಾ ಕಲಿಯಬಹುದು ಎಂದು ನಾನು ಪ್ರಾಮಾಣಿಕವಾಗಿ ಭಾವಿಸಿದ್ದೆ. ಆಯ್ಕೆದಾರರು ಮತ್ತು ಕಾರ್ಯದರ್ಶಿಗಳ ಮಧ್ಯಪ್ರವೇಶ ಮತ್ತು ಪಕ್ಷಪಾತದ ಕಾರಣದಿಂದ ಅರ್ಹರಲ್ಲದ ಆಟಗಾರರಿಗಾಗಿ ಮಣೆ ಹಾಕಲಾಗುತ್ತಿದೆ. ಸಾಮರ್ಥ್ಯವುಳ್ಳ ಆಟಗಾರರಿಗೆ ಅವಕಾಶ ನಿರಾಕರಿಸಲಾಗಿದೆ ಎಂದು ಜಾಫರ್ ಕ್ರಿಕೆಟ್ ಸಂಸ್ಥೆಗೆ ಮಾಡಿರುವ ಇ-ಮೇಲ್ನಲ್ಲಿ ಬರೆದಿದ್ದಾರೆ.