ನವದೆಹಲಿ: ಗುರುವಾರ ಕರ್ನಾಟಕ ಮತ್ತು ಮುಂಬೈ ತಂಡಗಳ ನಡುವೆ ವಿಜಯ ಹಜಾರೆ ಟ್ರೋಫಿ ಸೆಮಿಫೈನಲ್ ಪಂದ್ಯ ನಡೆಯಲಿದೆ. ಈ ಪಂದ್ಯ ಟೂರ್ನಿಯ ಗರಿಷ್ಟ ರನ್ಗಳಿಸಿದವರ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನಗಳಲ್ಲಿರುವ ಯುವ ಆಟಗಾರರಾದ ದೇವದತ್ ಪಡಿಕ್ಕಲ್ ಮತ್ತು ಪೃಥ್ವಿ ಶಾ ನಡುವಿನ ಹೋರಾಟ ಎಂದೇ ಬಿಂಬಿಸಲಾಗುತ್ತಿದೆ.
ದೇವದತ್ ಪಡಿಕ್ಕಲ್ ಟೂರ್ನಿಯಲ್ಲಿ ಸತತ ನಾಲ್ಕು ಶತಕಗಳನ್ನು ಸಿಡಿಸುವ ಮೂಲಕ ಲಿಸ್ಟ್ ಎ ಕ್ರಿಕೆಟ್ನಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪಡಿಕ್ಕಲ್ 673 ರನ್ ಸಿಡಿಸಿ ಟೂರ್ನಿಯ ಗರಿಷ್ಠ ಸ್ಕೋರರ್ ಆಗಿದ್ದರೆ, ಮುಂಬೈ ತಂಡದ ನಾಯಕ ಪೃಥ್ವಿ ಶಾ 3 ಶತಕಗಳ(ಒಂದು ದ್ವಿಶತಕ) 589 ರನ್ ಸಿಡಿಸಿ 3ನೇ ಸ್ಥಾನದಲ್ಲಿದ್ದಾರೆ.
ಶಾ, ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಲ್ಲಿ ಮುಂಬೈ ತಂಡವನ್ನು ಮುನ್ನಡೆಸುತ್ತಿದ್ದಾರೆ. ಈಗಾಗಲೆ ಬಲಗೈ ಆಟಗಾರ 227 ರನ್ ಸಿಡಿಸುವ ಮೂಲಕ ಟೂರ್ನಿಯ ಇತಿಹಾಸದಲ್ಲೇ ವೈಯಕ್ತಿಕ ಗರಿಷ್ಠ ರನ್ ಸಿಡಿಸಿದ ಬ್ಯಾಟ್ಸ್ಮನ್ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಅವರು ಪುದುಚೇರಿ ವಿರುದ್ಧ ದ್ವಿಶತಕ ದಾಖಲಿಸಿದ್ದರು. ಅಲ್ಲದೆ ಕ್ವಾರ್ಟರ್ ಫೈನಲ್ನಲ್ಲೂ ಅಜೇಯ 185 ರನ್ಗಳಿಸಿ ಮುಂಬೈ ಸೆಮಿಫೈನಲ್ ಪ್ರವೇಶಿಸಲು ನೆರವಾಗಿದ್ದರು.
ಈ ಇಬ್ಬರು ಯಂಗ್ ಟೈಗರ್ಸ್ ನಾಳಿನ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿದ್ದಾರೆ. ಈ ಪಂದ್ಯದಲ್ಲಿ ರನ್ಗಳ ಮಳೆ ಸುರಿಯಲಿದೆ ಎಂದು ನಿರೀಕ್ಷಿಸಲಾಗಿದ್ದು, ಯಾರು ಭಾನುವಾರ ನಡೆಯುವ ಫೈನಲ್ ಪಂದ್ಯಕ್ಕೆ ತಮ್ಮ ತಂಡವನ್ನು ಕೊಂಡೊಯ್ಯಲಿದ್ದಾರೆ ಎಂದು ಕಾದು ನೋಡಬೇಕಿದೆ.