ದುಬೈ:13ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ನ 2ನೇ ಪಂದ್ಯ ಇಂದು ನಡೆಯಲಿದ್ದು, ಟೂರ್ನಿಯಲ್ಲಿ ಪಂಜಾಬ್ ಹಾಗೂ ಡೆಲ್ಲಿ ತಂಡ ಮುಖಾಮುಖಿಯಾಗುತ್ತಿವೆ. ಎರಡು ತಂಡಗಳಲ್ಲಿ ಯುವ ಪ್ಲೇಯರ್ಸ್ ಕ್ಯಾಪ್ಟನ್ ಆಗಿರುವುದು ಸಹಜವಾಗಿ ಕುತೂಹಲ ಹೆಚ್ಚಿಸಿದೆ.
ದುಬೈನ ಅಂತಾರಾಷ್ಟ್ರೀಯ ಮೈದಾನದಲ್ಲಿ ಸಂಜೆ 7:30ಕ್ಕೆ ಪಂದ್ಯ ಆರಂಭಗೊಳ್ಳಲಿದೆ. ಪಂಜಾಬ್ ತಂಡಕ್ಕೆ ಕನ್ನಡಿಗ ಅನಿಲ್ ಕುಂಬ್ಳೆ ಕೋಚ್ ಆಗಿದ್ದರೆ, ಡೆಲ್ಲಿ ತಂಡಕ್ಕೆ ರಿಕಿ ಪಾಂಟಿಂಗ್ ಕೋಚ್ ಆಗಿದ್ದಾರೆ. ವಿಶೇಷವಾಗಿ ಪಂಜಾಬ್ ತಂಡದ ಕ್ಯಾಪ್ಟನ್ ಆಗಿ ಕನ್ನಡಿಗ ಕೆ.ಎಲ್ ರಾಹುಲ್ ಇದ್ದಾರೆ. ಇವರ ನೇತೃತ್ವದ ತಂಡದಲ್ಲಿ ಕರ್ನಾಟಕದ ಪ್ಲೇಯರ್ಸ್ಗಳಾಗಿರುವ ಮಯಾಂಕ್ ಅಗರವಾಲ್, ಕರುಣ್ ನಾಯರ್, ಕೃಷ್ಣಪ್ಪ ಗೌತಮ್ ಹಾಗೂ ಜೆ. ಸುಚಿತ್ ಇದ್ದಾರೆ. ಜತೆಗೆ ಬ್ಯಾಟಿಂಗ್ನಲ್ಲಿ ಅಬ್ಬರಿಸಬಲ್ಲ ಕ್ರಿಸ್ ಗೆಲ್, ಮ್ಯಾಕ್ಸ್‌ವೆಲ್ ಇರುವುದು ತಂಡದ ಸಾಮರ್ಥ್ಯ ಮತ್ತಷ್ಟು ಹೆಚ್ಚಿಸಿದೆ.
ಪಂಜಾಬ್ ಬೌಲಿಂಗ್ ವಿಭಾಗ ಅಷ್ಟೊಂದು ಬಲಿಷ್ಠವಾಗಿಲ್ಲವಾದರೂ ಮೊಹಮ್ಮದ್ ಶಮಿ, ಕ್ರಿಸ್ ಜೋರ್ಡನ್, ಕಾಟ್ರೆಲ್, ಕೆ. ಗೌತಮ್, ರೆಹಮಾನ್ ತಂಡದ ಬೌಲಿಂಗ್ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಟೀಂ ಇಂಡಿಯಾದ ಬ್ಯಾಟಿಂಗ್ ಪಡೆ ಇದೆ. ಪ್ರಮುಖವಾಗಿ ಶಿಖರ್ ಧವನ್, ಪೃಥ್ವಿ ಶಾ, ಅಜಿಂಕ್ಯಾ ರಹಾನೆ, ರಿಷಭ್ ಪಂತ್, ಶ್ರೇಯಸ್ ಅಯ್ಯರ್ ಇದ್ದಾರೆ. ಜತೆಗೆ ಆರ್.ಅಶ್ವಿನ್, ಅಮಿತ್ ಮಿಶ್ರಾ, ಅಕ್ಷರ್ ಪಟೇಲ್, ವೇಗಿ ಇಶಾಂತ್ ಶರ್ಮಾ ತಂಡಕ್ಕೆ ಶಕ್ತಿಯಾಗಿದ್ದಾರೆ.
ಉಭಯ ತಂಡಗಳು ಇಲ್ಲಿಯವರೆಗೆ ಟ್ರೋಫಿ ಗೆದ್ದಿಲ್ಲ. ಹೀಗಾಗಿ ಎರಡು ತಂಡಗಳು ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಶುಭಾರಂಭ ಮಾಡುವ ಸಾಧ್ಯತೆ ಇದೆ. ಎರಡು ತಂಡಗಳು ಇಲ್ಲಿಯವರೆಗೆ 24 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು ಡೆಲ್ಲಿ 10 ಹಾಗೂ ಪಂಜಾಬ್ 14 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.