ಅಹಮದಾಬಾದ್:ಪ್ರವಾಸಿ ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಭ್ ಪಂತ್ ತವರಿನಲ್ಲಿ ಆಕರ್ಷಕ ಚೊಚ್ಚಲ ಟೆಸ್ಟ್ ಶತಕ ಸಿಡಿಸಿ ಮಿಂಚಿದ್ದು, ಈ ಮೂಲಕ ಆಂಗ್ಲ ಪಡೆ ವಿರುದ್ಧ ಮೇಲುಗೈ ಸಾಧಿಸಿದೆ.
ಅಹಮದಾಬಾದ್ನ ನರೇಂದ್ರ ಮೋದಿ ಮೈದಾನದಲ್ಲಿ ಭಾರತ-ಇಂಗ್ಲೆಂಡ್ ನಡುವೆ ನಾಲ್ಕನೇ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ಮೊದಲ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ 205 ರನ್ಗಳಿಕೆ ಮಾಡಿದೆ. ಇದಕ್ಕೆ ಪ್ರತ್ಯುತ್ತರವಾಗಿ ಬ್ಯಾಟಿಂಗ್ ಆರಂಭಿಸಿರುವ ಕೊಹ್ಲಿ ಪಡೆ ನಿನ್ನೆ 1ವಿಕೆಟ್ನಷ್ಟಕ್ಕೆ 24 ರನ್ಗಳಿಕೆ ಮಾಡಿತ್ತು. ಇಂದು ಬ್ಯಾಟಿಂಗ್ ಮುಂದುವರೆಸಿದ ಭಾರತ ಮೇಲಿಂದ ಮೇಲೆ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೊಳಗಾಗಿತ್ತು.
ಇದರ ಮಧ್ಯೆ ಉತ್ತಮವಾಗಿ ಬ್ಯಾಟ್ ಬೀಸಿದ ರೋಹಿತ್ ಶರ್ಮಾ 49 ರನ್, ರಿಷಭ್ ಪಂತ್ ಆಕರ್ಷಕ 101ರನ್ ಹಾಗೂ ವಾಷಿಂಗ್ಟನ್ ಸುಂದರ್ ಅಜೇಯ 60 ರನ್ಗಳಿಕೆ ಮಾಡಿ ತಂಡ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಭಾರತ ತಂಡ 2ನೇ ದಿನದಾಟದ ಅಂತ್ಯಕ್ಕೆ 7ವಿಕೆಟ್ ನಷ್ಟಕ್ಕೆ 294 ರನ್ಗಳಿಕೆ ಮಾಡಿದ್ದು, 89ರನ್ಗಳ ಮುನ್ನಡೆ ಪಡೆದುಕೊಂಡಿದೆ.
ಇದನ್ನೂ ಓದಿ: ನ್ಯೂಜಿಲ್ಯಾಂಡ್ ಮೇಲೆ ಸವಾರಿ: 4ನೇ ಟಿ-20 ಗೆದ್ದು ಸರಣಿ ಸಮಬಲ ಮಾಡಿಕೊಂಡ ಆಸ್ಟ್ರೇಲಿಯಾ
ಟೀಂ ಇಂಡಿಯಾ ಪರ ಶುಬಮನ್ ಗಿಲ್ (0), ಚೇತೇಶ್ವರ್ ಪೂಜಾರಾ (17), ವಿರಾಟ್ ಕೊಹ್ಲಿ (0),ರಹಾನೆ (27), ಆರ್.ಅಶ್ವಿನ್ (13)ರನ್ಗಳಿಕೆ ಮಾಡಿ ವಿಕೆಟ್ ಒಪ್ಪಿಸಿದರು. ಇದೀಗ ಸುಂದರ್ ಹಾಗೂ ಅಕ್ಸರ್ ಪಟೇಲ್ ನಾಳೆಗೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದಾರೆ.
ಇಂಗ್ಲೆಂಡ್ ಪರ ಆ್ಯಂಡರ್ಸನ್ 3 ವಿಕೆಟ್, ಬೆನ್ ಸ್ಟೋಕ್ಸ್ ಹಾಗೂ ಜಾಕ್ ಲೆಚ್ ತಲಾ 2 ವಿಕೆಟ್ ಪಡೆದುಕೊಂಡಿದ್ದಾರೆ.