ಸಿಡ್ನಿ: ಮುಂಬರುವ ಭಾರತ, ಆಸ್ಟ್ರೇಲಿಯಾ ನಡುವಿನ ಸರಣಿ ಅತ್ಯಂತ ಪೈಪೋಟಿಯಿಂದ ಕೂಡಿರಲಿದೆ. ಈ ಸರಣಿ ಆ್ಯಶಸ್ ಸರಣಿಯಷ್ಟೇ ರೋಚಕತೆ ಹೆಚ್ಚಿಸಲಿದೆ ಎಂದು ಆಸ್ಟ್ರೇಲಿಯಾ ಆಫ್ ಸ್ಪಿನರ್ ನಾಥನ್ ಲಿಯಾನ್ ಹೇಳಿದ್ದಾರೆ.
ಭಾರತ ಕ್ರಿಕೆಟ್ ತಂಡ ವರ್ಷಾಂತ್ಯಕ್ಕೆ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಪಾಲ್ಗೊಳ್ಳಲು, ಆಸ್ಟ್ರೇಲಿಯಾಗೆ ಪ್ರಯಾಣಿಸಲಿದೆ. ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಡಿಸೆಂಬರ್ 3ರಿಂದ ನಡೆಯಲಿದೆ. ಕ್ರಮವಾಗಿ ಗಬ್ಬಾ, ಓವಲ್ (ಡೇ ಅಂಡ್ ನೈಟ್ ಟೆಸ್ಟ್), ಎಂಸಿಜಿ ಮತ್ತು ಎಸ್‌ಸಿಜಿಯಲ್ಲಿ ನಡೆಯಲಿವೆ.
ಕಳೆದ ಬಾರಿ ಪ್ರವಾಸದಲ್ಲಿ ಭಾರತ ತಂಡ ನಮ್ಮ ವಿರುದ್ದ 2-1 ಪಂದ್ಯಗಳ ಅಂತರದಲ್ಲಿ ಸರಣಿ ಗೆದ್ದು ದಾಖಲೆ ಸೃಷ್ಟಿಸಿತ್ತು. ಇದೀಗ ಮುಂಬರುವ ಟೆಸ್ಟ್ ಸರಣಿಯನ್ನು ಎದುರು ನೋಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ಬಾರ್ಡರ್-ಗವಾಸ್ಕರ್ ಟ್ರೋಫಿ ಭಾರತದ ವಿರುದ್ಧ ಆಡುವುದನ್ನು ನೀವು ಮಿಸ್ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ ಅಲ್ಲವೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ನಿಸಂಶಯವಾಗಿ ಭಾರತದ ವಿರುದ್ಧ ನಾನು ಆಡಲು ಎದುರು ನೊಡುತ್ತಿದ್ದೇನೆ. ಮಾತ್ರವಲ್ಲ ಕಳೆದ ಬಾರಿಯ ಸೋಲಿಗೆ ಪ್ರತೀಕಾರ ತೀರಿಸಿಕೊಳ್ಳಬೇಕಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಮುಂದಿನ ತಿಂಗಳು ವೆಸ್ಟ್ ಇಂಡೀಸ್ ವಿರುದ್ಧ ಇಂಗ್ಲೆಂಡ್ ತಂಡ ಕ್ರಿಕೆಟ್ ಸರಣಿ ಆಡಲಿದೆ, ಕೊರೊನಾ ನಂತರ ನಡೆಯುವ ಮೊದಲ ಸರಣಿ ಇದಾಗಿರುವುದರಿಂದ ಈ ಸರಣಿಯ ಮೇಲೆ ಎಲ್ಲರ ಚಿತ್ತ ನೆಟ್ಟಿದೆ ಎಂದರು.