ಪುಣೆ:ಭಾರತ ತಂಡದ ಪರ ಪದಾರ್ಪಣೆ ಮಾಡಿದ ಪದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿದ ಪ್ರಸಿಧ್ ಕೃಷ್ಣ ಪ್ರತಿಭೆ ತಮಗೆ ಆಶ್ಚರ್ಯವೇನೂ ತಂದಿಲ್ಲ. ಏಕೆಂದರೆ, ಆತ ಧೈರ್ಯವಂತ ಮತ್ತು ಆಟದ ಬಗ್ಗೆ ಉತ್ತಮ ತಿಳುವಳಿಕೆ ಹೊಂದಿದ್ದಾನೆ ಎಂದು ಕನ್ನಡಿಗ ಕೆ.ಎಲ್. ರಾಹುಲ್ ತಿಳಿಸಿದ್ದಾರೆ.
ಪ್ರಸಿಧ್ ಕೃಷ್ಣ ಆಂಗ್ಲರ ವಿರುದ್ಧದ ಮೊದಲ ಪಂದ್ಯದಲ್ಲಿ 54 ರನ್ ನೀಡಿ 4 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅವರು ಮೊದಲ 3 ಓವರ್ಗಳಲ್ಲಿ 37 ರನ್ ಬಿಟ್ಟುಕೊಟ್ಟಿದ್ದರು, ಆದರೆ ನಂತರ ಅದ್ಭುತ ಕಮ್ಬ್ಯಾಕ್ ಮಾಡಿ 5.1 ಓವರ್ಗಳಲ್ಲಿ ಕೇವಲ 17 ರನ್ ಬಿಟ್ಟುಕೊಟ್ಟರಲ್ಲದೆ ಪ್ರಮುಖ 4 ವಿಕೆಟ್ ಪಡೆದು ಭಾರತಕ್ಕೆ 66 ರನ್ ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
"ಅವರು(ಪ್ರಸಿಧ್) ನಿನ್ನೆ (ಮಾರ್ಚ್ 23) ಏನೂ ಮಾಡಿದರೋ ಅದರ ಬಗ್ಗೆ ನನಗೆ ಯಾವುದೇ ಆಶ್ಚರ್ಯವಿಲ್ಲ. ಭಾರತ ತಂಡಕ್ಕೆ ಕರ್ನಾಟಕದಿಂದ ಬರುವ ಮುಂದಿನ ಆಟಗಾರ ಪ್ರಸಿಧ್ ಆಗಿರುತ್ತಾರೆ ಎಂದು ನನಗೆ ವಿಶ್ವಾಸವಿತ್ತು. ನಾವಿಬ್ಬರು ಒಂದೇ ಬ್ಯಾಚ್‌ನವರಲ್ಲ, ಆದರೆ ನಾನು ಅವರು ಸಾಕಷ್ಟು ಜೂನಿಯರ್ ಲೆವೆಲ್ನಲ್ಲಿ ಆಡುವುದನ್ನು ನೋಡಿದ್ದೇನೆ. ನೆಟ್ಸ್ಗಳಲ್ಲಿಯೂ ನೋಡಿದ್ದೆ. ಆತ ನಮ್ಮ ಕಣ್ಣು ಸೆಳೆಯುವ ಪ್ಲೇಯರ್ ಆಗಿದ್ದ. ಅವರು ಎತ್ತರದ ವ್ಯಕ್ತಿ, ವೇಗವಾಗಿ ಬೌಲ್ ಮಾಡುವುದರ ಜೊತೆಗೆ ವಿಕೆಟ್‌ನಿಂದ ಸಾಕಷ್ಟು ಬೌನ್ಸ್ ಪಡೆಯುತ್ತಾರೆ " ಎಂದು ರಾಹುಲ್ ಯುವ ಬೌಲರ್ ಕುರಿತು ಮಾಧ್ಯಮದ ಮುಂದೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.