ಸಿಡ್ನಿ: ರೋಹಿತ್ ಶರ್ಮಾ ಮತ್ತು ಜಸ್ಪ್ರೀತ್ ಬುಮ್ರಾ ಅವರಂತಹ ವಿಶೇಷ ಆಟಗಾರರಿಲ್ಲದೆ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಗೆದ್ದಿರುವುದಕ್ಕೆ ನಾನು ತುಂಬಾ ಗರ್ವ ಪಡುತ್ತೇನೆ ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. ಈ ಗೆಲುವಿಗೆ ಕಾರಣರಾದ ಹಾರ್ದಿಕ್ ಪಾಂಡ್ಯ ಅವರನ್ನು 'ರಾ ಟ್ಯಾಲೆಂಟ್' ಎಂದು ಅವರು ಬಣ್ಣಿಸಿದ್ದಾರೆ.
ಹಾರ್ದಿಕ್ ಪಾಂಡ್ಯ ಸ್ಫೋಟಕ ಬ್ಯಾಟಿಂಗ್ ವೈಖರಿ "ಇದೊಂದು ಅದ್ಭುತ ಸಾಧನೆ. ನಾವು ಒಂದು ಟಿ20 ಸ್ಪೆಷಲಿಸ್ಟ್ ತಂಡದಂತೆ ಆಡಿದ್ದೇವೆ. ವಾಸ್ತವವೆಂದರೆ, ನಾವು ರೋಹಿತ್ ಹಾಗೂ ಬುಮ್ರಾ ಅವರಂತಹ ನುರಿತ ವೈಟ್ಬಾಲ್ ಆಟಗಾರರಿಲ್ಲದೆ ಸರಣಿ ಗೆದ್ದಿದ್ದೇವೆ. ಇದು ನನಗೆ ಹೆಚ್ಚು ಖುಷಿ ನೀಡಿದೆ. ಈ ತಂಡವನ್ನು ಹೊಂದಿರುವುದಕ್ಕೆ ಹೆಮ್ಮೆಯಿದೆ" ಎಂದು ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟರು.
"ಹಾರ್ದಿಕ್ 2016ರಲ್ಲಿ ಭಾರತ ತಂಡಕ್ಕೆ ಬರಲು ಕಾರಣವೆಂದರೆ ಆತನ ಶುದ್ಧ ಸಾಮರ್ಥ್ಯ. ಅವರೊಬ್ಬ ಕಚ್ಚಾ ಸಾಮರ್ಥ್ಯವುಳ್ಳ ಪ್ರತಿಭೆ. ಇದು ಅವರ ಸಮಯ ಎಂದು ಪಾಂಡ್ಯ ಅರಿತುಕೊಂಡಿದ್ದಾರೆ. ಮುಂದಿನ 4-5 ವರ್ಷಗಳಲ್ಲಿ ಭಾರತಕ್ಕೆ ಹಲವಾರು ಪಂದ್ಯಗಳನ್ನು ಗೆಲ್ಲಿಸಿಕೊಡಬಲ್ಲ ಆಟಗಾರ ಆತ. ಅದು ಎಲ್ಲಿಯಾದರೂ ಸರಿ. ಅವರ ಯೋಜನೆಗಳು ಸರಿಯಾಗಿವೆ ಮತ್ತು ಅದನ್ನು ನೋಡಲು ನಾನು ಕೂಡ ಖುಷಿಯಾಗಿದ್ದೇನೆ" ಎಂದು ಕೊಹ್ಲಿ ಪ್ರಶಂಸೆ ವ್ಯಕ್ತಪಡಿಸಿದರು.
ಆಟಗಾರನೊಬ್ಬ ಫಿನಿಶಿಂಗ್ ಜವಾಬ್ದಾರಿಯನ್ನು ಯಾವ ರೀತಿ ಹೊರಬೇಕೆಂಬುದನ್ನು ಪಾಂಡ್ಯ ಅರಿತುಕೊಂಡಿದ್ದಾರೆ. ಕ್ರೀಸಿನಲ್ಲಿ ಸಂಪೂರ್ಣ ಹೃದಯದಿಂದ ಆಡುವ ಅವರು ಖಂಡಿತವಾಗಿಯೂ ಸ್ಪರ್ಧಾತ್ಮಕ ಸ್ವಭಾವ ಹೊಂದಿದ್ದು, ಅದನ್ನು ಅತ್ಯುನ್ನತ ಮಟ್ಟದಲ್ಲಿ ಕಾರ್ಯಗತಗೊಳಿಸುವ ಕೌಶಲ್ಯಗಳನ್ನು ಹೊಂದಿದ್ದಾರೆ ಎಂದು ಟೀಮ್ ಇಂಡಿಯಾ ನಾಯಕ ಕೊಂಡಾಡಿದ್ದಾರೆ.
ಐಪಿಎಲ್ ವೇಳೆ ಹ್ಯಾಮ್ಸ್ಟ್ರಿಂಗ್ ಗಾಯಕ್ಕೆ ತುತ್ತಾಗಿರುವ ರೋಹಿತ್ ಶರ್ಮಾ ಅವರನ್ನು ಸೀಮಿತ ಓವರ್ಗಳ ತಂಡದಿಂದ ವಿಶ್ರಾಂತಿ ನೀಡಲಾಗಿದೆ. ಬುಮ್ರಾರಿಗೆ ಕೆಲಸದ ನಿರ್ವಹಣೆಯನ್ನು ತಗ್ಗಿಸಲು ವಿಶ್ರಾಂತಿ ನೀಡಲಾಗಿದೆ.